ಮಡಿಕೇರಿ, ಮೇ 31: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ ಜಿಲ್ಲಾಡಳಿತ ಮನೆ ಕಟ್ಟಿಸಿಕೊಡಬೇಕು ಎಂದು ಜಿಲ್ಲಾ ಬಿಜೆಪಿ ಹಾಗೂ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಒತ್ತಾಯಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸಂತ್ರಸ್ತರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮಾತನಾಡಿ, ಗ್ರಾಮ ಹಾಗೂ ನಗರಸಭೆ ಅಧಿಕಾರಿಗಳು ಈ ಮೊದಲು ಸಂತ್ರಸ್ತರ ಇಚ್ಛೆಯಂತೆ ಗುರುತಿಸಿ ಪಟ್ಟಿಯಲ್ಲಿ ಬಿಡುಗಡೆ ಮಾಡಿರುವ ಸ್ಥಳದಲ್ಲೆ ಮನೆಗಳನ್ನು ನೀಡಬೇಕು. ಮೂಲ ಸ್ಥಳದಲ್ಲಿಯೇ ತೋಟ, ಶಾಲೆಗಳ ಸೌಲಭ್ಯವಿರುª Àದರಿಂದ ಬೇಡಿಕೆಯಂತೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಪ್ರಕೃತಿ ವಿಕೋಪದಿಂದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾರ ನಷ್ಟವಾಗಿದೆ. ಈ ಪಂಚಾಯಿತಿ ವ್ಯಾಪ್ತಿಯ ರೈತರ ಬೆಳೆ ಸಾಲ, ಕೃಷಿ ಅಭಿವೃದ್ಧಿ ಸಾಲ, ಯಂತ್ರೋಪಕರಣ ಸಾಲ ಇನ್ನಿತರ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಜಿಲ್ಲಾಡಳಿತ ಸರಕಾರದ ಅನುದಾನದಲ್ಲಿ ಗುಣಮಟ್ಟದ ಮನೆಗಳನ್ನು ಕಟ್ಟುತ್ತಿವೆ. ಈ ಬಗ್ಗೆ ಪರಿಶೀಲನೆ ಕೂಡ ವಾರಕ್ಕೊಮ್ಮೆ ನಡೆಯುತ್ತಿದೆ. ಇನ್ನು ಸ್ಥಳೀಯ ಮಟ್ಟದ ಅಧಿಕಾರಿಗಳಿಗೂ ಸಂತ್ರಸ್ತರ ಸಮಸ್ಯೆ ಆಲಿಸಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ವಕ್ತಾರ ನಾಪಂಡ ರವಿ ಕಾಳಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್, ವಿ.ಕೆ.ಲೋಕೇಶ್, ಕೆ.ಜಿ. ಕಿರ್ತನ್ ಮೊದಲಾದವರು ಹಾಜರಿದ್ದರು.