ಮಡಿಕೇರಿ, ಜೂ. 1: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶೀರಾಝ್ ಅಹ್ಮದ್, ಕಾರ್ಮಿಕ ಇಲಾಖೆ, ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ಕಿರಣ್ ಜಂಟಿ ತಂಡದೊಂದಿಗೆ ಭಾಗವಹಿಸಿದ್ದರು

ಮಡಿಕೇರಿ ತಾಲೂಕಿನ ವಿವಿಧೆಡೆ ಬಾಲ ಕಾರ್ಮಿಕರ ಬಗ್ಗೆ ತಪಾಸಣೆ ನಡೆಸಲಾಯಿತು. ಈ ಸಂದರ್ಭ ಬಾಲಕಾರ್ಮಿಕ ಕಾಯ್ದೆ ಬಗ್ಗೆ ಹಾಗೂ ಉಚ್ಚ ನ್ಯಾಯಾಲಯದ ಆದೇಶದಂತೆ ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವದನ್ನು ನಿಷೇಧಿಸಲಾಗಿದೆ. ಇಂತಹ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಕಾರ್ಮಿಕರನ್ನು ಸಾಗಿಸುವದು ಅಪರಾಧ. ದುರ್ಘಟನೆಗಳು ಸಂಭವಿಸಿದಲ್ಲಿ ಯಾವದೇ ಪರಿಹಾರ ದೂರೆಕಿಸಲು ಕಾನೂನಿನಲ್ಲಿ ಅವಕಾಶವಿರುವದಿಲ್ಲ ಆದ್ದರಿಂದ ಇದರ ಬಗ್ಗೆ ಎಚ್ಚರವಹಿಸುವದು ಅಗತ್ಯ ಎಂಬದಾಗಿ ತಿಳಿಸಲಾಯಿತು. ಭಿತ್ತಿಪತ್ರಗಳ ಮೂಲಕ ಅರಿವು ಮುಡಿಸಿ ಎಚ್ಚರಿಸಲಾಯಿತು. ಹೊಟೇಲ್, ಗ್ಯಾರೇಜ್ ಹಾಗೂ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವದು ಹಾಗೂ 18 ವರ್ಷ ದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿ ಕೊಳ್ಳುವದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ನೆನಪಿಸಲಾಯಿತು.