ಗುಡ್ಡೆಹೊಸೂರು, ಜೂ. 1: ಇಲ್ಲಿನ ಗ್ರಾ.ಪಂ. ಸಾಮಾನ್ಯ ಸಭೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಯಿತು. ಗ್ರಾಮ ಪಂಚಾಯಿತಿಯ ಬಿ.ಜೆ.ಪಿ. ಬೆಂಬಲಿತ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಶಾಸಕ ಅಪ್ಪಚ್ಚು ರಂಜನ್ ಅವರು 26 ಮಂದಿಗೆ ಹಕ್ಕುಪತ್ರ ವಿತರಿಸಿದ್ದರು. ತದನಂತರ ಹಕ್ಕುಪತ್ರ ಪಡೆದ ಹಲವು ಮಂದಿ ಅರಣ್ಯದಲ್ಲಿ ವಾಸವಾಗಿದ್ದಾರೆ.
ಈ ಸಂಬಂಧ ಇಲ್ಲಿನ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೂ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೂ ತರಲಾಯಿತು.
ಆದರೆ ಸೂಕ್ತ ಕ್ರಮಕ್ಕಾಗಿ ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಅವರಿಗೆ ಉಪವಿಭಾಗಾಧಿಕಾರಿಗಳು ಪತ್ರ ಮುಖಾಂತರ ತಿಳಿಸಿದ್ದಾರೆ. ಅದರಂತೆ ಪಿ.ಡಿ.ಓ. ಶ್ಯಾಂ ಅವರು ಪತ್ರ ವ್ಯವಹಾರ ನಡೆಸಿದ್ದು, ಹಕ್ಕುಪತ್ರ ನೀಡಿರುವ ಜಾಗವು ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ 111 ರಲ್ಲಿದ್ದು ಹಕ್ಕುಪತ್ರ ಪಡೆದ ಫಲಾನುಭವಿಗಳು ಹಲವಾರು ಬಾರಿ ಪಂಚಾಯಿತಿಗೆ ಸುತ್ತಾಡಿದ್ದಾರೆ.
ಆದರೆ ಮರ ತೆರವುಗೊಳಿಸಿ ಹಕ್ಕುಪತ್ರ ನೀಡಿದವರಿಗೆ ಮನೆ ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಇಲ್ಲಿನ ಗ್ರಾ.ಪಂ. ಸದಸ್ಯರು ದೂರಿದ್ದಾರೆ.
ಮರ ತೆರವುಗೊಳಿಸಲು ಅರಣ್ಯ ಇಲಾಖೆಯವರು ಮೀನಾಮೇಷ ಎಣಿಸುತ್ತಿದ್ದಾರೆ. ಮುಂದಿನ 20 ದಿನಗಳಲ್ಲಿ ಅರಣ್ಯ ಇಲಾಖೆಯವರು ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಫಲಾನುಭವಿಗಳನ್ನು ಸೇರಿಸಿಕೊಂಡು ಬಿ.ಜೆ.ಪಿ. ಸದಸ್ಯರು ಹಕ್ಕುಪತ್ರ ನೀಡಿರುವ ಜಾಗದಲ್ಲಿ ಪ್ರತಿಭಟನೆ ನಡೆಸುವದಾಗಿ ಸದಸ್ಯರು ತಿಳಿಸಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಬಹಿಷ್ಕರಿಸಿದ ಬಿ.ಜೆ.ಪಿ. ಸದಸ್ಯರಾದ ಪ್ರವೀಣ್, ಡಾಟಿ, ಶಶಿ, ಪಾರ್ವತಿ, ಗಂಗೆ, ಬಸವರಾಜ್, ಶೋಭಾ, ಪುಷ್ಪ, ಕವಿತಾ, ಶಿವಪ್ಪ ಮುಂತಾದವರು ಹಾಜರಿದ್ದರು.
ಕಳೆದ ಬಾರಿ ಸುರಿದ ಭಾರೀ ಮಳೆಗೆ ಬೆಟ್ಟಗಳೇ ಉರುಳಿ 18 ಮಂದಿ ಜೀವ ಕಳೆದುಕೊಂಡರು. ಆದರೆ ದೊಡ್ಡ ಗಾತ್ರದ ಮರಗಳ ನಡುವೆ ವಾಸವಿರುವ ಈ ಬಡ ಕುಟುಂಬಗಳ ಬಗ್ಗೆ ಸಂಬಂಧಿಸಿದ ಇಲಾಖೆಯವರು ಮತ್ತು ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.