ಮಡಿಕೇರಿ, ಮೇ 31 : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಜೂನ್ 1 ಮತ್ತು 2 ರಂದು ನಗರದ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ, ಎರಡು ದಿನಗಳ ಕಾಲ ನಡೆಯುವ 8ನೇ ವರ್ಷದ ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದರು. ಜೂ.1 ರಂದು ಬೆಳಗ್ಗೆ 11 ಗಂಟೆಗೆ ಮಡಿಕೆÉೀರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಅಸೋಸಿಯೇಷನ್ ಅಧ್ಯಕ್ಷ ಜೋಸೆಫ್ ಸ್ಯಾಂ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂತ ಮೈಕೆಲರ ಚರ್ಚ್‍ನ ಫಾ. ಆಲ್ಫ್ರೆಡ್ ಜಾನ್ ಮೆಂಡೋನ್ಸ ಹಾಗೂ ಸಂತ ಮೈಕೆಲರ ವಿದ್ಯಾ ಸಂಸ್ಥೆಯ ಫಾ. ನವೀನ್ ಸಾನಿಧ್ಯ ವಹಿಸಲಿದ್ದಾರೆ. ಕೊಡಗು ವಲಯದ ಫಾ. ಮದುಲೈ ಮುತ್ತು ಧ್ವಜಾರೋಹಣ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಗ್ರೇಷಿಯನ್ ರೋಡ್ರಿಗಸ್ ಉಪಸ್ಥಿತರಿರುವರು.

ಇದೇ ಸಂದರ್ಭ ನಗರಸಭಾ ಮಾಜಿ ಸದಸ್ಯ ಕೆ.ಜಿ. ಪೀಟರ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಅಂತೋಣಿ ಡಿಸೋಜ, ಶೀಲಾ ಡಿಸೋಜ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಅಗಸ್ಟಿನ್ ಸೇವೆಯನ್ನು ಸ್ಮರಿಸಿ ಗೌರವಿಸಲಾಗುವದೆಂದು ತಿಳಿಸಿದರು.

ಸಮಾರೋಪ ಸಮಾರಂಭವು ಜೂ.2 ರಂದು ಸಂಜೆ 4.30 ಗಂಟೆಗೆ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಮೊದಲಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಈಗಾಗಲೆ 22 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, ಕ್ರೀಡಾಕೂಟ ನಡೆಯುವ ಸ್ಥಳದಲ್ಲೆ ಆರಂಭಿಕ ದಿನದಂದು ಬೆಳಗ್ಗೆ 8.30 ಗಂಟೆಗೆ ಟೈಸ್ ಹಾಕಲಾಗುತ್ತದೆ. ಪಂದ್ಯಾವಳಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದ್ದು, ಮೊದಲ ನಗದು ಬಹುಮಾನವನ್ನು ಮೈಸೂರಿನ ಉದ್ಯಮಿ ಗ್ರೇಷಿಯನ್ ರೋಡ್ರಿಗಸ್, ಟ್ರೋಫಿಯನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಹಾಗೂ ಜೋಕಿಂ ವಾಸ್ ನೀಡಲಿದ್ದಾರೆ. ದ್ವಿತೀಯ ನಗದು ಬಹುಮಾನವನ್ನು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಬಿಜು, ಟ್ರೋಫಿಯನ್ನು ವರ್ತಕ ಬೇಬಿ ಮತ್ತು ತೃತೀಯ ನಗದು ಬಹುಮಾನವನ್ನು ವಾಲ್ಟರ್ ಡಿಸೋಜ ಹಾಗೂ ಶೀಲಾ ಡಿಸೋಜ, ಟ್ರೋಫಿಯನ್ನು ಮಾರ್ಷಲ್ ರೋಡ್ರಿಗಸ್ ನೀಡಲಿದ್ದಾರೆ.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೆರ್ಮಿ ಡಿಸೋಜ ಪಾರಿತೋಷಕಗಳ ಪ್ರಾಯೋಜಕ ರಾಗಿದ್ದಾರೆಂದು ಮಾಹಿತಿ ನೀಡಿದರು. ಕ್ರಿಕೆಟ್ ಪಂದ್ಯಾವಳಿಯೊಂದಿಗೆ ಮಹಿಳೆÉಯರು ಹಾಗೂ ಮಕ್ಕಳಿಗೂ ವಿವಿಧ ಆಟೋಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದ ಪ್ರಯುಕ್ತ ಆಯೋಜಿಸಿರುವ ಲಕ್ಕಿ ಡಿಪ್‍ನ ಡ್ರಾ ಸಮಾರೋಪ ಸಮಾರಂಭದ ಸಂದರ್ಭ ನಡೆಯಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೈದಾನ ಸಂಚಾಲಕ ಅಲೆಕ್ಸ್, ಅಸೋಸಿಯೇಷನ್ ಉಪಾಧ್ಯಕ್ಷ ಡೆನ್ನಿ ಬರೋಸ್, ಸದಸ್ಯರುಗಳಾದ ಎ.ಅರುಣ್ ಹಾಗೂ ಗಿಲ್ಬರ್ಟ್ ಲೋಬೋ ಉಪಸ್ಥಿತರಿದ್ದರು.