ಮಡಿಕೇರಿ, ಮೇ 31 : ಕೊಡವ ಬುಡಕಟ್ಟು ಕುಲದ ಪ್ರಧಾನ ಹಕ್ಕೊತ್ತಾಯಗಳ ಬಗ್ಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನೂತನ ಎನ್‍ಡಿಎ ಸರ್ಕಾರ ಗಮನಹರಿಸಬೇಕು ಮತ್ತು ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜೂ.14 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ತಿಳಿಸಿದೆÉ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಅತ್ಯಂತ ಸಣ್ಣ ಜನಾಂಗವಾಗಿರುವ ಕೊಡವ ಕುಲಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಹಕ್ಕಿಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲೆ ಉಲ್ಲೇಖಿಸಲಾಗಿದೆ. ಈ ಹಕ್ಕುಗಳಿಗಾಗಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದರು. ತುರ್ತಾಗಿ ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಲು ಶಾಸನ ರಚಿಸಬೇಕೆಂದು ನಾಚಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಮಂಡೇಪಂಡ ಮನೋಜ್, ಕಾಟುಮಣಿಯಂಡ ಉಮೇಶ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.