ಒಡೆಯನಪುರ, ಮೇ 31: ಗೋಪಾಲಪುರ ಗ್ರಾಮದ ಸಂತ ಅಂಥೋಣಿ ಚರ್ಚ್ನ ವಾರ್ಷಿಕೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮ ದೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎಂ.ವಿಲಿಯಮ್ ಹಾಗೂ ಗೋಪಾಲಪುರ ಸಂತ ಅಂಥೋಣಿ ಚರ್ಚಿನ ಫಾದರ್ ಡೇವಿಡ್ ಸಗಾಯ್ರಾಜ್ ನೇತೃತ್ವದಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ, ಗೀತಾಗಾಯನ ಕಾರ್ಯಕ್ರಮ ನೆರವೇರಿಸಲಾಯಿತು.
ಚರ್ಚಿನ ಒಳಂಗಾಣ ಮತ್ತು ಹೊರಂಗಾಣ ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ಮಾತೆ ಏಸು ಕ್ರಿಸ್ತನ ಪ್ರತಿಮೆಯನ್ನು ಅಲಂಕರಿಸಿದ ಮಂಟಪ ವಾದ್ಯಗೋಷ್ಠಿ ಯೊಂದಿಗೆ ಮುಖ್ಯರಸ್ತೆ ಮೂಲಕ ಒಡೆಯನಪುರ ಗ್ರಾಮದ ಮೆರವಣಿಗೆ ಯಲ್ಲಿ ಸಾಗಿದರು. ಸಿಡಿಮದ್ದು ಸಿಡಿಸಿ ಸಂಭ್ರಮಪಟ್ಟರು. ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಕೇಂದ್ರದ ಧರ್ಮಗುರುಗಳಾದ ಮದಲೈಮುತ್, ಜೋನೆಸ್, ಸುಪ್ರಿತ್ ಮಿನೇಜಸ್, ಜೇಕಬ್ ಕೊಲನೂರ್, ಐಜಾಕ್, ಅಚಾಂಡಿ, ಜಾನ್ ಡಿಕುನ ಮುಂತಾದವರು ಇದ್ದರು. ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಕೆ.ಎ. ವಿಲಿಯಮ್ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಅನ್ನದಾನ ಏರ್ಪಡಿಸಲಾಗಿತ್ತು.