ಮಡಿಕೇರಿ, ಮೇ 30: ಪ್ರಸ್ತುತದ 21ನೆಯ ಶತಮಾನ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಕ್ಷಿಪ್ರಗತಿಯ ಬೆಳವಣಿಗೆ ಸಾಧಿಸುತ್ತಿದ್ದರೆ, ಕೊಡಗಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಜನರು ಇನ್ನೂ ಪರಸ್ಪರ ಸಂಪರ್ಕ ಸಾಧಿಸಲು ಬವಣೆ ಪಡುವಂತಾಗಿದೆ. ದೂರವಾಣಿ ಸಂಪರ್ಕ, ಮೊಬೈಲ್ ವ್ಯವಸ್ಥೆಗಳು ಬಹುಶಃ ಜಿಲ್ಲೆಯ ಎಲ್ಲೆಡೆಗಳಲ್ಲಿದ್ದರೂ ಇವುಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಜನರು ಇನ್ನೂ ಶಿಲಾಯುಗದ ಮಾದರಿಯ ಬದುಕು ಅನುಭವಿಸುವಂತಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯಾವದೇ ಸ್ಥಿರದೂರವಾಣಿಗಳು ಸದ್ದಿಲ್ಲದೆ ಕೇವಲ ಆಟಿಕೆಯ ಪರಿಕರದಂತಾಗಿವೆ. ಇನ್ನು ಹಲವಾರು ಮೊಬೈಲ್ ಟವರ್‍ಗಳು ಕೂಡ ಕಾರ್ಯ ಸ್ಥಗಿತಗೊಂಡಿದ್ದು, ಇದನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಸರಕಾರದ ಸಾಮ್ಯತೆಗೆ ಒಳಪಟ್ಟಿರುವ ಬಿಎಸ್‍ಎನ್‍ಎಲ್ ಇಲಾಖೆ ಆಸಕ್ತಿತೋರುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಟವರ್‍ಗಳಿಗೆ, ವಿದ್ಯುತ್ ಪೂರೈಕೆ ಇಲ್ಲ, ಜನರೇಟರ್‍ಗಳಿಲ್ಲ, ಜನರೇಟರ್ ಇದ್ದರೆ ಡೀಸೆಲ್ ಇಲ್ಲ, ಸ್ಥಿರದೂರವಾಣಿ ಸಂಪರ್ಕ ಕಡಿತಗೊಂಡಿರುವದನ್ನು ಸರಿಪಡಿಸಲು ಅಗತ್ಯ ಕಾರ್ಡ್‍ಗಳು, ಇನ್ನಿತರ ಪರಿಕರಗಳು ಪೂರೈಕೆಯಾಗುತ್ತಿಲ್ಲ. ಜನರು ಈ ಬಗ್ಗೆ ಸ್ಥಳೀಯ ಲೈನ್‍ಮ್ಯಾನ್‍ಗಳು, ಇನ್ನಿತರ ಸಿಬ್ಬಂದಿಗಳನ್ನು ವಿಚಾರಿಸಿದರೆ, ಮೇಲ್ಮಟ್ಟದಿಂದ ಇವುಗಳೆಲ್ಲ ಲಭ್ಯವಾಗುತ್ತಿಲ್ಲ ಎಂಬ ಉತ್ತರ ದೊರೆಯುತ್ತಿದೆ. ಪ್ರಸ್ತುತ ಕಾಡಾನೆ, ಹುಲಿ ಹಾವಳಿ ಸೇರಿದಂತೆ ಹಲವು ಗಂಭೀರ ವಿಚಾರಗಳಿದ್ದು, ಈ ಬಗ್ಗೆ ಜನತೆ ತಾವುಗಳು ಆಯಾ ಸಂದರ್ಭದಲ್ಲಿ ಪರಸ್ಪರ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿಲ್ಲ.
ತುರ್ತು ಸಂದರ್ಭಗಳಲ್ಲೂ ತೀರಾ ಪರದಾಡುವಂತಾಗಿದೆ. ಇನ್ನೇನು ಮಳೆಗಾಲವೂ ಪ್ರಾರಂಭಗೊಳ್ಳುವ ದಿನಗಳು ಸನ್ನಿಹಿತವಾಗಿದ್ದು, ಗ್ರಾಮೀಣ ಪ್ರದೇಶಗಳ ಇಂತಹ ದುಸ್ಥಿತಿಯ ಬಗ್ಗೆ ಯಾರ ಬಳಿ ಮನವಿ ಮಾಡುವದು ಎಂದು ತಿಳಿಯದಾಗಿದೆ ಎಂಬದಾಗಿ ಹಲವಾರು ಮಂದಿ ‘ಶಕ್ತಿ’ಯೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಅಥವಾ ಮೊಬೈಲ್ ನಂಬರ್ ಸಂಗ್ರಹಿಸಿ ಕರೆಮಾಡಿದರೂ ಕರೆಯನ್ನು
(ಮೊದಲ ಪುಟದಿಂದ) ಸ್ವೀಕರಿಸುವದೇ ಇಲ್ಲ ಎಂದೂ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊಡಗಿನ ಗಡಿಭಾಗವಾಗಿರುವ ಬಿರುನಾಣಿ ವ್ಯಾಪ್ತಿಯಲ್ಲಿ ಬಿಎಸ್‍ಎನ್‍ಎಲ್‍ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಿಂದ ದೂರದಲ್ಲಿರುವ ಈ ಪ್ರದೇಶದ ಬಗ್ಗೆ ಹಿರಿಯ ಅಧಿಕಾರಿಗಳು ಆಸಕ್ತಿಯೇ ತೋರುತ್ತಿಲ್ಲ ಎಂದು ಅಲ್ಲಿನ ನಿವೃತ್ತ ಕ್ಯಾಪ್ಟನ್ ಬಿ.ಎ. ಮಾಚಯ್ಯ ಅವರು ಆಕ್ಷೇಪಿಸಿದ್ದಾರೆ. ಇಲ್ಲಿ ವಿದ್ಯುತ್ ಕಡಿತಗೊಂಡರೆ ಸ್ಥಿರದೂರವಾಣಿಗಳು ತನ್ನಿಂತಾನೇ ಸ್ಥಗಿತಗೊಳ್ಳುತ್ತವೆ. ಯುಪಿಎಸ್ ಆಗಲಿ, ಜನರೇಟರ್‍ಗೆ ಡೀಸೆಲ್ ಆಗಲಿ ನೀಡದಿರುವದರಿಂದ ಜನರು ಇತರ ಖಾಸಗಿ ಕಂಪೆನಿಗಳ ಸಿಮ್ ಪಡೆದು ವ್ಯವಸ್ಥೆಗೆ ಹೊಂದಿಕೊಳ್ಳುವಂತಾಗಿದೆ. ಆನ್‍ಲೈನ್, ಬ್ಯಾಂಕಿಂಗ್ ಸೇವೆ ಸೇರಿದಂತೆ ಬಹುತೇಕ ವಿಚಾರಗಳಿಗೆ ಈಗಿನ ಪರಿಸ್ಥಿತಿಯಿಂದ ತೊಂದರೆಯಾಗುತ್ತಿದ್ದು, ಹಿರಿಯ ಅಧಿಕಾರಿಗಳು ಇತ್ತ ತುರ್ತು ಗಮನ ಹರಿಸಬೇಕೆಂದು ಹಲವಾರು ಗ್ರಾಹಕರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.