ನಾಪೋಕ್ಲು, ಮೇ 30: ಕರ್ನಾಟಕ ಸರ್ಕಾರ ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಉದ್ದೇಶಿಸಿದ್ದು ಇಲ್ಲಿನ ಸರ್ಕಾರಿ ಪ್ರೌಢಶಾಲೆಯೂ ಕೆಪಿಎಸ್ ಶಾಲೆಯಾಗಿ ಜನಮನ್ನಣೆ ಗಳಿಸಲಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು.
ಇಲ್ಲಿನ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಎಲ್‍ಕೆಜಿ ಹಾಗೂ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಪೋಕ್ಲು ಹೋಬಳಿಗೆ ಸಂಬಂಧಿಸಿದಂತೆ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ 2019-20 ರ ಸಾಲಿನಲ್ಲಿ ಆರಂಭಿಸಲಾಗಿರುವ ಎಲ್‍ಕೆಜಿ ಮತ್ತು ಒಂದನೇ ಆಂಗ್ಲಮಾಧ್ಯಮ ತರಗತಿಗಳಿಗೆ ಅಧಿಕ ಮಕ್ಕಳು ದಾಖಲಾಗಿ ಶಾಲೆ ಪ್ರಗತಿಪಥದತ್ತ ಸಾಗಲಿ ಎಂದರು. ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಲ್‍ಕೆಜಿ ಹಾಗೂ ಒಂದನೇ ತರಗತಿಯನ್ನು ಕೆಪಿಎಸ್ ನ ಪ್ರೌಢಶಾಲಾ ವಿಭಾಗದಲ್ಲಿ ಪ್ರಾರಂಭಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು. ಪ್ರಮುಖರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪ್ರಮೀಳ ಹಿರಿಯರಾದ ಕಲ್ಯಾಟಂಡ ಪೂಣಚ್ಚ, ಸ್ಥಳದಾನಿಗಳಾದ ನಿವೃತ್ತ ಶಿಕ್ಷಕ ಮಕ್ಕಿ ಸುಬ್ರಹ್ಮಣ್ಯ, ಸ್ಥಳದಾನಿಗಳಾದ ಬೊಳ್ಯಪಂಡ ಜಾನುಪೂಣಚ್ಚ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುರೇಶ್, ಪ್ರೌಢಶಾಲಾ ಶಿಕ್ಷಕರು, ಪದವಿಪೂರ್ವ ವಿಭಾಗದ ಉಪನ್ಯಾಸಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ನಳಿನಿ ಸ್ವಾಗತಿಸಿ, ಸಹಶಿಕ್ಷಕಿ ಕೆ.ಬಿ. ಉಷಾರಾಣಿ ವಂದಿಸಿದರು.