ಗೋಣಿಕೊಪ್ಪಲು, ಮೇ 30: ಇತ್ತೀಚೆಗೆ ಶ್ರೀಮಂಗಲ ಸನಿಹದ ಕಾಯಮಾನಿಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ಚೋಕಿರ ಸುಧಾ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು.
ಕಳೆದ ಇಪ್ಪತ್ತು ದಿನಗಳ ಹಿಂದೆ ಶ್ರೀಮಂಗಲ ಗ್ರಾ.ಪಂ.ಯ ಕಾಯಿಮಾನಿ ಸಮೀಪ ಚೋಕಿರ ಸುಧಾ ಎಂಬವರು ಮುಂಜಾನೆ ನಡೆದುಕೊಂಡು ಬರುತ್ತಿದ್ದ ಸಂದರ್ಭ ಮನೆಯ ಸಮೀಪವೇ ಕಾಡಾನೆ ದಾಳಿ ನಡೆಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ರೈತ ಸಂಘ ಹಾಗೂ ಸಾರ್ವಜನಿಕರು ಪ್ರತಿಭಟನೆಗೆ ನಡೆಸಿದ್ದರು. ಹಲವು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು.
ನಂತರ ನಿರಂತರ ಅರಣ್ಯಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ ರೈತ ಸಂಘದ ಪದಾಧಿಕಾರಿಗಳು ಪರಿಹಾರ ನೀಡುವಂತೆ ಒತ್ತಾಯಿಸಿದ್ದವು. ಈ ಬಗ್ಗೆ ಮನು ಸೋಮಯ್ಯನವರು ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಕಳುಹಿಸಿದ್ದರು ಈ ಬಗ್ಗೆ ನಾಗರಹೊಳೆಯಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಅರಣ್ಯ ಆಧಿಕಾರಿಗಳು ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ 25 ಲಕ್ಷ ಪರಿಹಾರ ನೀಡುವಂತೆ ಶಿಫಾರಸ್ಸು ಪತ್ರ ಹಸ್ತಾಂತರಿಸಿದ್ದರು. ಇದೀಗ ರೈತ ಸಂಘದ ಹೋರಾಟದ ಫಲವಾಗಿ ಮೊದಲ ಹಂತದಲ್ಲಿ 5 ಲಕ್ಷದ ಹಣವನ್ನು ಚೆಕ್ ಮೂಲಕ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅರಣ್ಯ ಇಲಾಖೆಯ ಅಧಿಕಾರಿ ವೀರೇಂದ್ರ ಶ್ರೀಮಂಗಲ ಗಾ.ಪಂ. ಅಧ್ಯಕ್ಷೆ ಚೋಕೀರ ಕಲ್ಪನ, ಕುಟುಂಬದ ಅಧ್ಯಕ್ಷ ಚೋಕೀರ ಹ್ಯಾರಿ, ಮೃತ ಸುಧಾರ ತಾಯಿ, ಸಹೋದರಿಯರು, ಮಗ ಹಾಗೂ ಕುಟುಂಬಸ್ಥರು, ರೈತ ಸಂಘದ ಹಲವು ಸದಸ್ಯರು ಹಾಜರಿದ್ದರು.
- ಹೆಚ್.ಕೆ. ಜಗದೀಶ್