ಸ್ಪಷ್ಟನೆ
ಮಡಿಕೇರಿ, ಮೇ 30: ತಾ. 28 ರ ‘ಶಕ್ತಿ’ಯಲ್ಲಿ ಶಾಸಕರಿಂದ ಪ್ರಾಂಶುಪಾಲ ತರಾಟೆಗೆ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಯು ತಪ್ಪು ಗ್ರಹಿಕೆಯಿಂದ ಕೂಡಿದ್ದು, ವಾಸ್ತವಕ್ಕೆ ದೂರವಾಗಿದೆ ಎಂದು ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಪದವಿ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎಲ್ಲಾ ಸಂಯೋಜಿತ, ಸ್ವಾಯತ್ತ ಹಾಗೂ ಘಟಕ ಕಾಲೇಜುಗಳಲ್ಲಿ ಪ್ರವೇಶಾತಿ ನೀಡುವಾಗ ವಿಶ್ವವಿದ್ಯಾನಿಲಯ ಮಂಜೂರಾತಿ ನೀಡಿದ ವಿದ್ಯಾರ್ಥಿ ಪರಿಮಿತಿಗೆ ಅನುಗುಣವಾಗಿ ಹಾಗೂ ಸರಕಾರದ ಮೀಸಲಾತಿ (ಎಲ್ಲಾ ವರ್ಗಗಳಿಗೆ ಸಂಬಂಧಿಸಿದ) ಆದೇಶದಂತೆ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಆಯ್ಕೆ ಮಾಡಬೇಕಾಗುತ್ತದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ನಿಯಮದಂತೆ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುತ್ತಿದೆ.
ಕಾಲೇಜಿಗೆ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗಳಲ್ಲಿ ಶೇ. 90 ರಷ್ಟು ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಿಂದ ಮತ್ತು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುವಾಗ ಬಡ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಿರಾಕರಿಸುವ ಪ್ರಮೇಯ ಏರ್ಪಡುವದಿಲ್ಲ. ಕಾರ್ಯಪ್ಪ ಕಾಲೇಜಿಗೆ ಇತರ ಕಾಲೇಜುಗಳಂತೆ ಮಂಗಳೂರು ವಿಶ್ವವಿದ್ಯಾನಿಲಯ ನಿಗದಿಪಡಿಸಿರುವ ಪ್ರವೇಶ ಪರಿಮಿತಿಯಿರುವದರಿಂದ ಅರ್ಜಿ ಹಾಕಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡುವದು ಅಸಾಧ್ಯ. ಅಲ್ಲದೆ, ಮಡಿಕೇರಿಯ ಇತರ 2 ಕಾಲೇಜುಗಳು ಸೇರಿ ಕೊಡಗಿನಲ್ಲಿ ಒಟ್ಟು 16 ಪದವಿ ಕಾಲೇಜುಗಳಿರುವಾಗ ಕೊಡಗಿನ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಗ್ರಹಿಕೆ ಸರಿಯಲ್ಲ. ಕಳೆದ ವರ್ಷ ಕಾರ್ಯಪ್ಪ ಕಾಲೇಜು ಹಲವಾರು ಪ್ರಕೃತಿ ವಿಕೋಪ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿ ವಿಶ್ವವಿದ್ಯಾನಿಲಯದಿಂದ ಶುಲ್ಕ ವಿನಾಯಿತಿ ಕೂಡ ಒದಗಿಸಿಕೊಟ್ಟಿದ್ದು, ಈ ವರ್ಷವೂ ಅದನ್ನು ಮುಂದುವರಿಸಿದೆ. ಶಾಸಕರ ಸೂಚನೆಯ ಮೇರೆಗೆ ಕೆಲವು ವಿದ್ಯಾರ್ಥಿಗಳಿಗೆ ನಿಯಮಾನುಸಾರ ಈ ಕಾಲೇಜಿನಲ್ಲಿ ಪ್ರವೇಶಾತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.