ಮಡಿಕೇರಿ, ಮೇ 28 : ಪ್ರಸಕ್ತ ಮುಂಗಾರು ಅವಧಿಯಲ್ಲಿ ಹೆಚ್ಚಿನ ಅತಿವೃಷ್ಟಿಯಿಂದಾಗಿ ಭೂಕುಸಿತ ಹಾಗೂ ಪ್ರವಾಹ ಸಂಭವಿಸಿದಲ್ಲಿ ಮುಂಜಾಗ್ರತವಾಗಿ ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ತಾ. 29 ರಂದು (ಇಂದು) ಹೆಬ್ಬೆಟ್ಟಗೇರಿ ಮತ್ತು ಹಟ್ಟಿಹೊಳೆಯಲ್ಲಿ ‘ಪ್ರಾತ್ಯಕ್ಷಿಕೆ’ ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಜೂನ್ ತಿಂಗಳಿನಿಂದ ಮುಂಗಾರು ಆರಂಭವಾಗಲಿದ್ದು, ಎಲ್ಲಾ ರಕ್ಷಣಾ ಪಡೆಯ ತಂಡಗಳು ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧವಾಗಿರಬೇಕಿದೆ ಎಂದು ತಿಳಿಸಿದರು.
ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಪಡೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಪ್, ಅಗ್ನಿಶಾಮಕ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು ರಕ್ಷಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಮಂಗಳೂರು ವಲಯ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಶಿವಶಂಕರ್ ಅವರು ಕಳೆದ ವರ್ಷ ಜೋಡುಪಾಲ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯದ ಅನುಭವವನ್ನು ಹಂಚಿ ಕೊಂಡು ಸಾರ್ವಜನಿಕರ ರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಬಗ್ಗೆ ಮಾಹಿತಿ ನೀಡಿದರು.
ಕಳೆದ ಬಾರಿ ರಕ್ಷಣೆ ಕಾರ್ಯಾ ಚರಣೆ ಸಂದರ್ಭದಲ್ಲಿ ಮಾಹಿತಿ ಸಂವಹನದ ಕೊರತೆ ಎದುರಾದುದನ್ನು ಸಭೆಯ ಗಮನಕ್ಕೆ ತಂದರು.
ಕರ್ನಾಟಕ ಸಿವಿಲ್ ಡಿಫೆನ್ಸ್ ಕಮಾಂಡರ್ ಆದ ಡಾ.ಚೇತನ್ ಮಾತನಾಡಿ ಕಳೆದ ಬಾರಿ ಅತಿವೃಷ್ಟಿ ಸಂದರ್ಭದಲ್ಲಿ ಹಾಲೇರಿ, ದೇವಸ್ತೂರು, ಕಾಲೂರು, ಹಟ್ಟಿಹೊಳೆ, ಮಾದಾಪುರ ಹಾಗೂ ವಿವಿಧ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು.
ಅತಿವೃಷ್ಟಿ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ತೇಲುವ ಸೇತುವೆ ನಿರ್ಮಾಣ, ಮಾನವ ರಹಿತ ಯಂತ್ರಚಾಲಿತ ದೋಣಿ ಬಳಕೆಯ ಬಗ್ಗೆ ಅವರು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಅಧಿಕಾರಿ(ಕಂದಾಯ ಇಲಾಖೆ) ಡಾ.ವಿಶ್ವನಾಥ್ ಅವರು ಮಾತನಾಡಿ ಪ್ರಕೃತಿ ವಿಕೋಪ, ಅತೀವೃಷ್ಟಿ ಎದುರಿಸುವ ಸಂಬಂಧ ಈಗಾಗಲೇ ಜಿಲ್ಲಾಡಳಿತ ಗುರುತಿಸ ಲಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಅನಾಹುತ ಸಂಭವಿಸುವ ಮುನ್ನ ಬೇರೆಡೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವದು. ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವದು ಮತ್ತು ಮಳೆ ಮುನ್ಸೂಚನೆಯ ವೈಜ್ಞಾನಿಕ ಮಾಹಿತಿಯನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಿಳಿಸುವ ಮೂಲಕ ಸಂಭವಿಸಬಹುದಾದಂತಹ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು.
ಅಗ್ನಿಶಾಮಕ ಇಲಾಖೆಯ ಮೈಸೂರು ವಿಭಾಗದ ಅಧಿಕಾರಿ ವೈ.ಎ. ಕೌಸರ್ ಮಾತನಾಡಿ ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜನ, ಜಾನುವಾರು ರಕ್ಷಣೆ ಮಾಡಬೇಕಿದೆ. ಬೋಟ್ ಸೇರಿದಂತೆ ಅಗತ್ಯ ಉಪಕರಣಗಳನ್ನು ಇಟ್ಟುಕೊಳ್ಳಬೇಕಿದೆ ಎಂದರು.
ಎನ್‍ಡಿಆರ್‍ಎಫ್‍ನ ಅಧಿಕಾರಿ ಅತಿವೃಷ್ಟಿ ಸಂಭವಿಸುವ ಸಂದರ್ಭದಲ್ಲಿ ಯಾವ ರೀತಿ ರಕ್ಷಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುವದರ ಜೊತೆಗೆ ಅಗತ್ಯ ಜಾಗೃತಿ ಮೂಡಿಸಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ವಿವಿಧ ತಂಡಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಅಣಕು ಪ್ರದರ್ಶನ ಸಿದ್ಧತೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಉಪ ವಿಬಾಗಾಧಿಕಾರಿ ಟಿ.ಜವರೇಗೌಡ, ನೋಡಲ್ ಅಧಿಕಾರಿ ಷಂಶುದ್ದಿನ್, ಗುಡೂರು ಭಿಮಸೇನಾ ಇತರರು ಇದ್ದರು.
.