*ಸಿದ್ದಾಪುರ, ಮೇ 27: ವಾಲ್ನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ, ಕುಶಾಲನಗರ ಹೋಬಳಿ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ “ಕೃಷಿ ಇಲಾಖೆ ರೈತರ ಮನೆಗೆ” ಎಂಬ ಕೃಷಿ ಅಭಿಯಾನ ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಕೃಷಿ ಕಾರ್ಯಾಗಾರ ನಡೆಯಿತು.

ಕಾಫಿ ಬೆಳೆಗಾರ ಚೇಂದಂಡ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಡಿಚಂಡ ಮುರಳಿ ಮಾದಯ್ಯ, ಹೋಬಳಿ ಕೃಷಿ ಅಧಿಕಾರಿ ಪೂಣಚ್ಚ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ್, ಚೆಟ್ಟಳ್ಳಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ವೆಂಕಟರಮಣಪ್ಪ, ವೀರೇಂದ್ರಕುಮಾರ್, ಕೃಷಿ ಇಲಾಖೆ ಅಧಿಕಾರಿಗಳಾದ ಚಂಗಪ್ಪ, ಶೈಲಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಚೆಮನೆ ಸುಧಿ ಕುಮಾರ್, ಭುವನೇಂದ್ರ, ಕವಿತ, ನಳಿನಿ, ಸತೀಶ್, ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಸ್ಥಳಿಯ ಕೃಷಿಕರು ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷಿಕರಿಗೆ ಮತ್ತು ಕಾಫಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರಾಂಬುಟಾನ್, ಬೆಣ್ಣೆ ಹಣ್ಣು, ಕಮಲಾಕ್ಷಿ ಹಣ್ಣು, ರಾಮ ಫಲ, ಸೀತಾ ಫಲ ಮತ್ತು ಜನುಮ ಫಲ ಮುಂತಾದ ಅಪುರೂಪದ ಹಣ್ಣುಗಳ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿ ಪ್ರಮುಖ ಕೃಷಿಯೊಂದಿಗೆ ಇಂತಹ ಹಣ್ಣುಗಳ ಕೃಷಿಯಲ್ಲಿ ಬೆಳೆಗಾರರು ತೊಡಗಿ ಆರ್ಥಿಕ ಸಬಲೀಕರಣ ಆಗುವದರ ಬಗ್ಗೆ ವಿವರಣೆ ನೀಡಿದರು. ಜೊತೆಗೆ ಅಡಿಕೆ ಮತ್ತು ಕರಿಮೆಣಸು ಕೃಷಿ ಮತ್ತು ರೋಗ ಬಾಧೆ ತಡೆಗಟ್ಟುವದರ ಬಗ್ಗೆ ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಗೌರಮ್ಮ ಪ್ರಾರ್ಥಿಸಿದರು. ಕೃಷಿ ಅಧಿಕಾರಿ ಸ್ವಾಗತಿಸಿ, ವಂದಿಸಿದರು. ಮುಕುಂದ ನಿರೂಪಿಸಿದರು.