ಗೋಣಿಕೊಪ್ಪಲು, ಮೇ 28: ದ.ಕೊಡಗಿನ ಟಿ.ಶೆಟ್ಟಿಗೇರಿ ಭಾಗದ ಕಾಫಿ ತೋಟದಲ್ಲಿ ಧಾಂದಲೆ ನಡೆಸಿ ಬೆಳೆಗಳಿಗೆ ಹಾನಿ ಮಾಡಿ ಸಾರ್ವಜನಿಕರಿಗೆ, ರೈತರಿಗೆ ಭಯ ಹುಟ್ಟಿಸಿ ತೋಟದಲ್ಲಿಯೇ ಬೀಡು ಬಿಟ್ಟಿದ್ದ 7 ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಂಗಳವಾರ ಮುಂಜಾನೆಯಿಂದಲೇ ಆನೆ ಓಡಿಸುವ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆÉ ಸ್ಥಳೀಯ ಸಾರ್ವಜನಿಕರು ಸಾಥ್ ನೀಡಿದರು. ಮಧ್ಯಾಹ್ನ 3 ಗಂಟೆಯ ವೇಳೆಗೆ ಕಾಡಾನೆಗಳನ್ನು ತಾವಳಗೇರಿ, ವಗೈರೆ, ಟಿ.ಶೆಟ್ಟಿಗೇರಿ, ವೆಸ್ಟ್‍ನೆಮ್ಮಲೆ ಮುಖಾಂತರ ಬ್ರಹ್ಮಗಿರಿ ಅರಣ್ಯಕ್ಕೆ ಅಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಜೀವಹಾನಿ ಸೇರಿದಂತೆ ರೈತರು ಬೆಳೆದ ಬೆಳೆಗಳ ಮೇಲೆ ಕಾಡಾನೆಗಳು ದಾಂಧಲೆ ನಡೆಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಓಡಿಸುವ ಕುರಿತು ಮನವಿ ಮಾಡಲಾಗಿತ್ತು.

ಪೊನ್ನಂಪೇಟೆ ಅರಣ್ಯ ಅಧಿಕಾರಿ ಆರ್‍ಎಫ್‍ಓ ಗಂಗಾಧರ್ ನೇತೃತ್ವದಲ್ಲಿ ಡಿಆರ್‍ಎಫ್‍ಒ ರಾಘನಾಯಕ್ ಸಿಬ್ಬಂದಿಗಳಾದ ಸಂಜೇಯ್, ಚೇತನ್, ಆರ್‍ಆರ್‍ಟಿ ತಂಡ ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಾಧ್ಯಮದೊಂದಿಗೆ ಮಾತನಾಡಿದ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ರೈತರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಆನೆಗಳನ್ನು ಬ್ರಹ್ಮಗಿರಿ ಅರಣ್ಯಕ್ಕೆ ಹಿರಿಯ ಅಧಿಕಾರಿಗಳ ಆದೇಶದ ಮೇರೆ ಓಡಿಸಲಾಗಿದೆ. ರೈತರ ಸಾಕಷ್ಟು ಬೆಳೆ ನಾಶವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆದಷ್ಟು ಬೇಗನೆ ರೈತರಿಗೆ ಸೇರಬೇಕಾದ ಪರಿಹಾರ ಧನವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗುವದೆಂದು ತಿಳಿಸಿದರು.