ಕುಶಾಲನಗರ, ಮೇ 29: ಕುಶಾಲನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನದ ಸರ ಕಸಿದು ಪರಾರಿಯಾದ ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರಿಗೆ ತೆರಳಲು ಬಸ್ ಹತ್ತುತ್ತಿದ್ದ ಹಾರಂಗಿ ಮೂಲದ ಮಹಿಳೆ ರತ್ನಮ್ಮ ಎಂಬವರ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಅಪರಿಚಿತ ಮಹಿಳೆ ಕಸಿದು ಪರಾರಿಯಾಗಿದ್ದಾಳೆ. ಇದೇ ಸಂದರ್ಭ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಮಹಿಳೆಯನ್ನು ಪತ್ತೆಹಚ್ಚಿ ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಮಹಿಳೆ ತಮಿಳುನಾಡು ಸೇಲಂ ಮೂಲದ ಕೆ.ಲಕ್ಷ್ಮಿ ಎಂದು ತಿಳಿದುಬಂದಿದ್ದು ಮಹಿಳೆ ಬಳಿಯಿದ್ದ ಚಿನ್ನದ ಸರ ವಶಪಡಿಸಿಕೊಂಡು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಈ ಮಹಿಳೆಯೊಂದಿಗೆ ಸರಗಳ್ಳರ ತಂಡ ಕಾರ್ಯಾಚರಣೆ ನಡೆಸುತ್ತಿರುವ ಸಂಶಯ ವ್ಯಕ್ತಗೊಂಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ ಅವರ ಸೂಚನೆಯಂತೆ ಡಿವೈಎಸ್ಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಠಾಣಾಧಿಕಾರಿ ಜಗದೀಶ್ ಮತ್ತು ಸ್ಥಳೀಯ ಅಪರಾಧ ಪತ್ತೆದಳ ತಂಡ ಮಹಿಳೆಯ ಮಾಹಿತಿ ಆಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಪತ್ತೆದಳದ ಉಮೇಶ್, ಜಯಪ್ರಕಾಶ್, ರವೀಂದ್ರ, ಜೋಸೆಫ್, ಸುಧೀಶ್ ಕುಮಾರ್, ನಿಶಾ, ರಶ್ಮಿ, ಹರ್ಷಾವತಿ, ಶ್ವೇತಾ, ಚಾಲಕರಾದ ಗಣೇಶ್ ಮತ್ತು ಪ್ರವೀಣ್ ಪಾಲ್ಗೊಂಡಿದ್ದರು.