ಸೋಮವಾರಪೇಟೆ, ಮೇ 29: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಬಿಯರ್ ಬಾಟಲ್‍ನಿಂದ ಮಹಿಳೆಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈರ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಹಾನಗಲ್ಲು ಬಾಣೆ ಗ್ರಾಮದ ಸರಸ್ವತಿ ಅವರ ಪುತ್ರ ವಿಜಯ್ ಮತ್ತು ಆತನ ಚಿಕ್ಕಪ್ಪ ಕುಳ್ಳ ವಾಸುದೇವ್ ಎಂಬವರೇ ಆರೋಪಿಗಳಾಗಿದ್ದು, ಮೊಕದ್ದಮೆ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ. ಈರ್ವರು ಆರೋಪಿಗಳು ಅದೇ ಗ್ರಾಮದ ಮಂಜುಳಾ ಎಂಬವರ ವಿರುದ್ಧ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದು, ಬಿಯರ್ ಬಾಟಲ್‍ನಿಂದ ತಲೆ ಹಾಗೂ ಕೈ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಮಂಜುಳಾ ಅವರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸಲಾಗಿದೆ. ಕೈಭಾಗದ ನರಗಳು ತುಂಡಾಗಿರುವ ಹಿನ್ನೆಲೆ ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ಆರೋಪಿಗಳಾದ ವಿಜಯ್ ಮತ್ತು ವಾಸುದೇವ್ ಅವರುಗಳ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 307 ಅಡಿಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಠಾಣಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.

ಮತ್ತೆರಡು ಮೊಕದ್ದಮೆ: ಇದೇ ಘಟನೆಗೆ ಸಂಬಂಧಿಸಿದಂತೆ ಮಂಜುಳಾ ಅವರ ಪುತ್ರ ಅಶ್ವತ್ ತನ್ನ ಮೇಲೆ ಹಲ್ಲೆ ನಡೆಸಿರುವದಾಗಿ ವಿಜಯ್‍ನ ತಾಯಿ ಸರಸ್ವತಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಗಳು ನಡೆಯುವದಕ್ಕೂ ಮುನ್ನ ತನ್ನ ಮೇಲೆ ಅದೇ ಗ್ರಾಮದ ಜೀವನ್, ವಿಜಯ್, ಕುಮ್ಮಣ್ಣಿ, ಮಿಥುನ್ ಅವರುಗಳು ಹಲ್ಲೆ ನಡೆಸಿರುವದಾಗಿ ಮಂಜುಳಾ ಅವರ ಮತ್ತೋರ್ವ ಪುತ್ರ ಅನಿಲ್ ದೂರು ನೀಡಿದ್ದಾರೆ.