ಮಡಿಕೇರಿ, ಮೇ 29: ಜಿಲ್ಲಾಡಳಿತದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಪ್ರಕೃತಿ ವಿಕೋಪ ಎದುರಾದರೆ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಗಳ ಬಗ್ಗೆ ಹೆಬ್ಬೆಟ್ಟಗೇರಿ ಹಾಗೂ ಹಟ್ಟಿಹೊಳೆಯಲ್ಲಿ ಅಣಕು ಪ್ರದರ್ಶನ ನಡೆಯಿತು. ಒಂದು ವೇಳೆ ಕಳೆದ ಬಾರಿಯಂತೆ ಈ ಬಾರಿಯೂ ಪ್ರಕೃತಿ ಮುನಿದರೆ, ಜೀವಗಳನ್ನು ರಕ್ಷಿಸಲು ಯಾವ ರೀತಿ ರಕ್ಷಣಾ ಕಾರ್ಯಕೈಗೊಳ್ಳಬಹುದು ಎಂಬ ಬಗ್ಗೆ ಕಾಲ್ಪನಿಕ ಸನ್ನಿವೇಶ ಸೃಷ್ಟಿಸಿ ಜನರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಣಕು ಪ್ರದರ್ಶನ ಮಾಡಲಾಯಿತು.ಹೀಗಿತ್ತು ಕಾರ್ಯಾಚರಣೆಇದು ಕೇವಲ ಕಾಲ್ಪನಿಕವಷ್ಟೇ. ಅದರಂತೆ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದೆ. ವಾಯು - ವರುಣನ ಆರ್ಭಟದಿಂದ ಇದ್ದಕ್ಕಿದ್ದಂತೆ ಹೆಬ್ಬೆಟ್ಟಗೇರಿಯಲ್ಲಿ ಭೂಕುಸಿತ ಉಂಟಾಗಿ; ಹಟ್ಟಿಹೊಳೆಯಲ್ಲಿ ಪ್ರವಾಹ ಬಂದು ಜೀವಗಳು ಸಂಕಷ್ಟದಲ್ಲಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರವಾಣಿ ಮೂಲಕ ಮಾಹಿತಿ ಬಂದರೆ, ಈ ವೇಳೆ ರಕ್ಷಣಾ ಕಾರ್ಯ ಯಾವ ರೀತಿ ಆರಂಭವಾಗುತ್ತದೆ ಎಂಬದನ್ನು ಮುಂದೆ ಓದಿ.ಮೊದಲಿಗೆ ಹೆಬ್ಬೆಟ್ಟಗೇರಿಗೆ ಅಗ್ನಿಶಾಮಕ ಇಲಾಖೆಯ ವಾಹನ ಹಾಗೂ ಸಿಬ್ಬಂದಿ ಧಾವಿಸಿ ಬರುತ್ತಾರೆ. ಈ ವೇಳೆ ರಸ್ತೆ ಮಧ್ಯೆ ಮರಗಳೂ ಬಿದ್ದಿರುತ್ತದೆ. ಅವುಗಳನ್ನೆಲ್ಲ ಕಡಿದು ತೆರವು ಮಾಡುತ್ತಾ ಸ್ಥಳಕ್ಕೆ ತಲಪುವ ಅಗ್ನಿಶಾಮಕ ಸಿಬ್ಬಂದಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ನೇರವಾಗಿ ತೆರಳಲಾಗದಿದ್ದಾಗ ಹಗ್ಗಗಳನ್ನು ದೊಡ್ಡ ದೊಡ್ಡ ಮರಗಳಿಗೆ ಕಟ್ಟಿ ಹಗ್ಗದ ಸಹಾಯದಿಂದ ಇಳಿಯ ಲಾರಂಭಿಸುತ್ತಾರೆ. ಮಣ್ಣಿನಡಿ ಸಿಲುಕಿದ್ದ ಗಾಯಗೊಂಡ ಒಬ್ಬೊಬ್ಬರನ್ನೇ ಮೇಲೆತ್ತಿ ‘ಸ್ಟ್ರಕ್ಚರ್’ ನಲ್ಲಿ ಮಲಗಿಸುತ್ತಾರೆ. ಅದೇ ವೇಳೆ ಸ್ಥಳದಲ್ಲಿ ಆಂಬ್ಯುಲೆನ್ಸ್ ಕೂಡ ಸಿದ್ಧವಿರುತ್ತದೆ. ಗಾಯಾಳುಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಹೊತ್ತೊಯ್ದು ಆಂಬ್ಯುಲೆನ್ಸ್ನಲ್ಲಿ ಸೇರಿಸಿ ಆಸ್ಪತ್ರೆಗೆ ಸಾಗಿಸಲಾಗುತ್ತದೆ.
(ಮೊದಲ ಪುಟದಿಂದ) ಗಾಯಾಳುಗಳನ್ನು ಸಾಗಿಸುವ ವೇಳೆ ಬೃಹತ್ ಹೊಂಡಗಳಿಂದಾಗಿ ಅತ್ತಿಂದಿತ್ತ ದಾಟಲು ಸಾಧ್ಯವಾಗದಿದ್ದಾಗ ಸ್ಟೀಲ್ ಏಣಿಗಳನ್ನು ಬಳಸಿಕೊಂಡು ದಾಟಿ ಬರುತ್ತಾರೆ. ತೀರಾ ಕೆಳಭಾಗದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಅವರುಗಳ ಸೊಂಟಕ್ಕೆ ಹಗ್ಗ ಕಟ್ಟಿ ಅಗ್ನಿಶಾಮಕ ಸಿಬ್ಬಂದಿ ಮೇಲಕ್ಕೆ ಎಳೆದು ತರುತ್ತಾರೆ.
ಆ ಹೊತ್ತಿಗೆ ಸ್ಥಳಕ್ಕೆ ದೌಡಾಯಿಸುವ ಸಿವಿಲ್ ಡಿಫೆನ್ಸ್ ಕ್ಷಿಪ್ರ ಕಾರ್ಯಪಡೆ ತಂಡ ಮರಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ನಿಟ್ಟಿನಲ್ಲಿ ಮರಗಳನ್ನು ಕತ್ತರಿಸಿ ರಕ್ಷಣಾ ಕಾರ್ಯ ಮುಂದುವರೆಸುತ್ತದೆ. ಮನೆಗಳ ಅವಶೇಷದಡಿ ಸಿಲುಕಿದವರನ್ನೂ ಮೇಲೆತ್ತಿ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತದೆ. ಈ ಕಾರ್ಯಾಚರಣೆ ನಡೆಯುತ್ತಿದ್ದಂತೆ ಎನ್ಡಿಆರ್ಎಫ್ ತಂಡ ಆಗಮಿಸಿ ಭಾರೀ ವೇಗದ ಕಾರ್ಯಾಚರಣೆಗೆ ಧುಮುಕುವದರೊಂದಿಗೆ ರಕ್ಷಣಾ ಕಾರ್ಯ ಮತ್ತಷ್ಟು ಬಿರುಸುಗೊಳ್ಳುತ್ತದೆ.
ಹಟ್ಟಿಹೊಳೆಯಲ್ಲಿ
ಹೆಬ್ಬೆಟ್ಟಗೇರಿಯಲ್ಲಿ ಅಣಕು ಪ್ರದರ್ಶನದ ಬಳಿಕ ಹಟ್ಟಿಹೊಳೆ ಸೇತುವೆ ಕೆಳಭಾಗದ ಹೊಳೆಯಲ್ಲಿ ಪ್ರವಾಹ ಎದುರಾದರೆ ನಡೆಸಲಾಗುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಣಕು ಪ್ರದರ್ಶನ ನಡೆಯಿತು. ಇದೂ ಕೂಡ ಕಾಲ್ಪನಿಕವಷ್ಟೇ. ಹೊಳೆಯಲ್ಲಿ ಪ್ರವಾಹ ಎದುರಾಗಿ ಹತ್ತಾರು ಮಂದಿ ನೀರಿನಲ್ಲಿ ಸಿಲುಕಿದ್ದಾರೆ. ಈ ವೇಳೆ ಎನ್ಡಿಆರ್ಎಫ್ ಸಿವಿಲ್ ಡಿಫೆನ್ಸ್ ತಂಡದವರು ರಕ್ಷಣಾ ಕಾರ್ಯಕ್ಕೆ ಮುಂದಾಗುತ್ತಾರೆ. ಮಾನವ ಚಾಲಿತ ಬೋಟ್, ರಿಮೋಟ್ ಮೂಲಕ ಸ್ವಯಂ ಚಾಲಿತ ಬೋಟ್, ಹಗ್ಗ ಹಾಗೂ ಲೈಫ್ಜಾಕೆಟ್, ಹಗ್ಗವನ್ನು ಅತ್ತಿಂದಿತ್ತ ಸಾಗಿಸುವ ಯಂತ್ರ, ನುರಿತ ಈಜುಗಾರರನ್ನೊಳಗೊಂಡು ಕಾರ್ಯಾಚರಣೆ ಮಾಡಿ ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗುತ್ತದೆ. ಇದೇ ವೇಳೆ 2 ಲೀಟರ್ನ 4 ಖಾಲಿ ಜ್ಯೂಸ್ ಬಾಟಲ್ಗಳನ್ನು ದೇಹಕ್ಕೆ ಕಟ್ಟಿಕೊಂಡು ಈಜಿ ದಡ ಸೇರುವ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಯಿತು. 2 ಲೀಟರ್ನ 4 ಖಾಲಿ ಬಾಟಲ್ಗಳು 80 ಕೆ.ಜಿ. ತೂಕದ ವ್ಯಕ್ತಿಯನ್ನು ನೀರಿನಲ್ಲಿ ತೇಲಿಸುತ್ತದೆ ಎಂದೂ ತಿಳಿಸಲಾಯಿತು. ನೀರಿನಿಂದ ವ್ಯಕ್ತಿಗಳನ್ನು ರಕ್ಷಿಸಿದ ಬಳಿಕ ತುರ್ತು ಕೈಗೊಳ್ಳಬೇಕಾದ ಚಿಕಿತ್ಸೆಯ ಕುರಿತು ವಿವರಿಸಲಾಯಿತು. ಎರಡೂ ಕಡೆ ಕೂಡ ಅಣಕು ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು.
ಎನ್ಡಿಆರ್ಎಫ್ ನೇತೃತ್ವವನ್ನು ಕಮಾಂಡೆಂಟ್ ವೆಲ್ಲೂರು ರಮೇಶ್, ಸಿವಿಲ್ ಡಿಫೆನ್ಸ್ನ ನೇತೃತ್ವವನ್ನು ಕ್ಯಾ. ಚೇತನ್, ಅಗ್ನಿಶಾಮಕ ಇಲಾಖೆ ನೇತೃತ್ವವನ್ನು ಗುರುಲಿಂಗಯ್ಯ ವಹಿಸಿದ್ದರು. ಡಿವೈಎಸ್ಪಿ ಸುಂದರ್ರಾಜ್ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಸುಮನ್, ಅಪರ ಜಿಲ್ಲಾಧಿಕಾರಿ ಶಿವರಾಜ್, ಜಿ.ಪಂ. ಸಿಇಓ ಲಕ್ಷ್ಮಿಪ್ರಿಯ, ಆರೋಗ್ಯ ಇಲಾಖಾಧಿಕಾರಿ ಮೋಹನ್, ಶಾಸಕರಾದ ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ. ಚಂದ್ರಕಲಾ, ಯಾಲದಾಳು ಪದ್ಮಾವತಿ ಮತ್ತಿತರು ಇದ್ದರು.