ಕೂಡಿಗೆ, ಮೇ 29: ಕಳೆದ ಆಗಸ್ಟ್ ತಿಂಗಳಲ್ಲಿ ಆದ ಪ್ರಕೃತಿ ವಿಕೋಪದಿಂದ ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರು ಹರಿದು ಕೂಡಿಗೆಯ ಸೇತುವೆ ಸಮೀಪವಿರುವ ಮೊದಲ ವಾರ್ಡಿನ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಬಾರಿ ನಷ್ಟವಾಗಿತ್ತು.
ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಗ್ರಾ.ಪಂ. ಮುಖೇನ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಕೇವಲ 3500 ರೂಗಳನ್ನು ತಾತ್ಕಾಲಿಕ ಪರಿಹಾರವನ್ನು ನೀಡಲಾಗಿತ್ತು. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆಯ ನಂತರ ಹೆಚ್ಚು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಜಾರು ನಡೆಸಿ ತೆರಳಿದ್ದರು. ಇದರಂತೆ ಗ್ರಾ.ಪಂ.ಯು ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸುವ ನಿಯಮಾನು ಸಾರ ಎಲ್ಲಾ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಒದಗಿಸಲಾಗಿದ್ದರೂ ಇದುವರೆಗೂ ಪರಿಹಾರ ಬಂದಿಲ್ಲ. ವಿಕೋಪದ ಸಂದರ್ಭ ನಷ್ಟ ಅನುಭವಿಸಿದ ಗ್ರಾಮಸ್ಥರು ಈ ಹಿಂದೆ ಗ್ರಾ.ಪಂ. ಎದುರು ಪ್ರತಿಭಟನೆಯನ್ನು ನಡೆಸಿದ್ದರು. ಅಲ್ಲದೆ, ಕಳೆದ ತಿಂಗಳು ನಡೆದ ಲೋಕಸಭೆ ಚುನಾವಣೆಯನ್ನು ಭಹಿಷ್ಕರಿಸಲು ತೀರ್ಮಾನ ಕೈಗೊಂಡು, ಚುನಾವಣೆ ಭಹಿಷ್ಕಾರ ಸಂದರ್ಭ ಅಪಾರ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚುನಾವಣೆಯನ್ನು ಭಹಿಷ್ಕರಿಸದಂತೆ ಮನವೊಲಿಸಿ, ಪರಿಹಾರವನ್ನು ನೀಡುವ ವ್ಯವಸ್ಥೆ ಮಾಡಲಾಗುವದು ಹಾಗೂ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ಒದಗಿಸುವದಾಗಿ ತಿಳಿಸಿದ್ದರು.
ಆದರೂ ಇದುವರೆಗೂ ಇದರ ಬಗ್ಗೆ ಯಾವದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ನಂತರ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್ ಅವರು, ಎರಡು ದಿನಗಳಲ್ಲಿ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡುವದಾಗಿ ಭರವಸೆ ನೀಡಿದರು.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ವೈ. ರವಿ, ರಾಮಚಂದ್ರ, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ, ಗ್ರಾಮಸ್ಥರಾದ ಫ್ಲವರ್ ಕೃಷ್ಣ, ಸರಸ್ವತಿ, ಜಯ, ಅಮೀನ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.