ಗುಡ್ಡೆಹೊಸೂರು, ಮೇ 27: ಗುಡ್ಡೆಹೊಸೂರು ರಾಜ್ಯ ಹೆದ್ದಾರಿಯ ಪ್ರಮುಖ ವೃತ್ತದಲ್ಲಿದ್ದು, ಈ ಗ್ರಾಮದ ಮೂಲಕ ಹಲವಾರು ಪ್ರವಾಸಿ ತಾಣಗಳಿಗೆ ತೆರಳಬೇಕಾಗಿದೆ. ಪ್ರಮುಖವಾಗಿ ದುಬಾರೆ, ಹಾರಂಗಿ ಜಲಾಶಯ, ನಿಸರ್ಗಧಾಮ, ವೀರಾಜಪೇಟೆ, ಕೇರಳ ರಾಜ್ಯಕ್ಕೂ ಈ ಮಾರ್ಗದ ಮೂಲಕವೆ ತೆರಳಬೇಕಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವೇಗದೂತ ಬಸ್‍ಗಳು ಸಂಚರಿಸಿದರೂ ಗ್ರಾಮಸ್ಥರಿಗೆ, ಪ್ರವಾಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ವೇಗದೂತ ಬಸ್‍ಗಳು ನಿಲುಗಡೆ ಇಲ್ಲದೆ ಪರದಾಡುವಂತಾಗಿದೆ. ಕಳೆದ 4 ವರ್ಷಗಳ ಹಿಂದೆ ಮಡಿಕೇರಿ ಡಿಪೋ ಬಸ್‍ಗಳು ಇಲ್ಲಿ ನಿಲುಗಡೆಯಾಗಲು ಸಂಸ್ಥೆಯ ವತಿಯಿಂದ ಆದೇಶವಿತ್ತು. ಕಾರಣ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಲ್ಲಿ ಬಸ್ ನಿಲುಗಡೆಗೆ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಯಾವದೇ ವೇಗದೂತ ಬಸ್‍ಗಳು ನಿಲುಗಡೆಯಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುವಂತೆ ಗುಡ್ಡೆಹೊಸೂರಿನ ನಾಗರಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ ನೀಡಲಾಗಿದೆ.

ಗುಡ್ಡೆಹೊಸೂರಿನಲ್ಲಿ ಬಸ್‍ಗಳು ನಿಲುಗಡೆಯಾಗದಿದ್ದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವದಾಗಿ ಇಲ್ಲಿನ ನಾಗರಿಕರು ತಿಳಿಸಿದ್ದಾರೆ. ದೂರದ ಮಂಗಳೂರು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದರು ಇಲ್ಲಿ ಬಸ್‍ಗಳನ್ನು ಚಾಲಕರು ನಿಲ್ಲಿಸುವದಿಲ್ಲ ಎಂದು ತಮ್ಮ ಅಸಹನೆಯನ್ನು ತೋಡಿಕೊಂಡಿದ್ದಾರೆ.