ಮಡಿಕೇರಿ ಮೇ 25 : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ 2019ನೇ ಸಾಲಿನ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ ತಾ. 28ರಿಂದ ಜೂ. 3ರವರೆಗೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಈ ಬಾರಿಯ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ರಾಜ್ಯ ಸಂಸ್ಥೆಗೆ ನೋಂದಾವಣೆಗೊಂಡ 16 ತಂಡಗಳು ಭಾಗವಹಿಸಲಿವೆ ಎಂದರು.
ಪಂದ್ಯಾವಳಿ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷನಾದ ತಾನೇ ನಿರ್ವಹಿಸಲಿರುವದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಪ್ರಾಯೋಜಕ ಸಂಸ್ಥೆಗಳ ಮುಖ್ಯಸ್ಥರುಗಳು ಪಾಲ್ಗೊಳ್ಳಲಿರುವದಾಗಿ ತಿಳಿಸಿದರು.
ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆ ಅತ್ಯಂತ ಜನಪ್ರಿಯವಾಗಿ ಬೆಳೆಯುತ್ತಿದ್ದು, ಹಾಕಿ ಮತ್ತು ಕ್ರಿಕೆಟ್ ಹಬ್ಬದಂತೆಯೇ ಫುಟ್ಬಾಲ್ ಪಂದ್ಯಾಳಿಗಳು ಕೂಡ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿವೆ. ಈಗಾಗಲೇ 20 ಕ್ಕೂ ಹೆಚ್ಚು ಫುಟ್ಬಾಲ್ ಪಂದ್ಯಾವಳಿಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ವಿಷಾದದ ವಿಚಾರವೆಂದರೆ ಅಸೋಸಿಯೇಷನ್‍ಗೆ ಒಳಪಟ್ಟು ಪಂದ್ಯಾವಳಿಗಳನ್ನು ನಡೆಸುತ್ತಿಲ್ಲ. ಫುಟ್‍ಬಾಲ್ ಕ್ರೀಡೆಯನ್ನು ಮತ್ತಷ್ಟು ವೃತ್ತಿ ಪರವಾಗಿ ಬೆಳೆಸುವ ನಿಟ್ಟಿನಲ್ಲಿ ಅಸೋಸಿಯೇಷನ್‍ನೊಂದಿಗೆ ಕೈಜೋಡಿಸಲಿ ಎಂದು ಮೋಹನ್ ಅಯ್ಯಪ್ಪ ಮನವಿ ಮಾಡಿದರು.
ಫುಟ್ಬಾಲ್ ಅಸೋಸಿಯೇಷನ್‍ನ ಜಿಲ್ಲಾ ತಂಡ ಕೊಡಗು ಇಲೆವೆನ್ ಕಳೆÉದ ಬಾರಿಯ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ 3ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟದ ಸಾಧನೆ ಮಾಡುವ ಮತ್ತು ಫುಟ್ಬಾಲ್‍ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳು ನಮ್ಮ ಮುಂದಿದೆ ಎಂದು ಮೋಹನ್ ಅಯ್ಯಪ್ಪ ಹೇಳಿದರು.
ಅಸೋಸಿಯೇಷನ್‍ನ ತೀರ್ಪುಗಾರÀ ಸಂಘದ ಅಧ್ಯಕ್ಷ ಮತ್ತು ಪ್ರಬಾರ ಕಾರ್ಯದರ್ಶಿ ಪಿ.ಎ.ನಾಗೇಶ್ ಮಾತನಾಡಿ, ಜಿಲ್ಲಾದ್ಯಂತ ಫುಟ್ಬಾಲ್ ಕ್ರೀಡೆಯನ್ನು ಬೆಳೆಸಲು ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿ ಲೀಗ್ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ಸಾಲಿನಲ್ಲಿ ಇದೇ ಮೈದಾನದಲ್ಲಿ 14ರ ಮತ್ತು 17ರ ವಯೋಮಾನದ ಕ್ರೀಡಾಪಟುಗಳಿಗೆ ಬೇಸಿಗೆ ತರಬೇತಿಯನ್ನು ನೀಡುವ ಚಿಂತನೆ ನಡೆದಿದೆ ಎಂದರು.
ಈ ಲೀಗ್ ಪಂದ್ಯಾವಳಿಯಲ್ಲಿ ನೇತಾಜಿ ಕೊಡಗರಹಳ್ಳಿ, ಸಹರಾ ಸಂಸ್ಥೆ ಒಂಟಿಯಂಗಡಿ, ಆಕ್ಸ್‍ಪೋರ್ಡ್ ವೀರಾಜಪೇಟೆ, ಹಳ್ಳಿಗಟ್ಟು ಫುಟ್ಬಾಲ್ ಸಂಸ್ಥೆ ಕುಂದ, ಐಎನ್‍ಎಸ್ ಗುಡ್ಡೆಹೊಸೂರು, ಮ್ಯಾನ್ಸ್ ಕಾಂಪೌಂಡ್ ಮಡಿಕೇರಿ, ಮಿಲನ್ಸ್ ಅಮ್ಮತ್ತಿ, ಯಂಗ್ ಇಂಡಿಯಾ ಪಾಲಿಬೆಟ್ಟ, ಪನ್ಯಾ ಸಂಸ್ಥೆ ಸುಂಟಿಕೊಪ್ಪ, ವೈಷ್ಣವಿ ಸಂಸ್ಥೆ ಕಟ್ಟೆಮಾಡು, ಕ್ಯಾಪ್ಟನ್ಸ್ ಫುಟ್ಬಾಲ್ ಸಂಸ್ಥೆ ಪಾಲಿಬೆಟ್ಟ, ಸಿಟಿ ಯುನೈಟೆಡ್ ಸುಂಟಿಕೊಪ್ಪ, ಕೆ.ಕೆ.ಎಫ್.ಸಿ. ಚೆಟ್ಟಳ್ಳಿ, ಯೂನಿವರ್ಸಲ್ ರಂಗಸಮುದ್ರ, ಭಗವತಿ ಹಾಲುಗುಂದ, ರೋಜಾರಿಯೋ ಗೋಣಿಕೊಪ್ಪ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಪಂದ್ಯಾಟವನ್ನು ಒಟ್ಟು 4 ಗುಂಪುಗಳಾಗಿ ಮಾಡಿ ಪ್ರತೀ ಗುಂಪಿನಿಂದ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ನೇರವಾಗಿ ಸೆಮಿಫೈನಲ್ ಪಂದ್ಯಾಟವನ್ನು ಏರ್ಪಡಿಸಿ ಆನಂತರ ಫೈನಲ್ ಪಂದ್ಯಾಟವನ್ನು ಏರ್ಪಡಿಸಲಾಗುವದು. ಕೇವಲ ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಅಂದರೆ ‘ಎ’ ಫಾರಂಗೆ ಸಹಿ ಮಾಡಿರುವ ಆಟಗಾರರಿಗೆ ಅವಕಾಶ ಇರುತ್ತದೆ. ಲೀಗ್ ಹಂತದಲ್ಲಿ ಒಟ್ಟು 24 ಪಂದ್ಯಗಳು ನಾಕೌಟ್ ಮಾದರಿಯಲ್ಲಿ 7 ಪಂದ್ಯಗಳು ಒಟ್ಟು 31 ಪಂದ್ಯಾಟಗಳನ್ನು ನಡೆಸಲಾಗುತ್ತದೆ. ಪ್ರತೀ ದಿನ ಪಂದ್ಯಾಟಗಳನ್ನು ನಡೆಸಲಾಗುವದು. ಈ ಪಂದ್ಯಾಟವನ್ನು ನಡೆಸಲು ಕೊಡಗಿನಿಂದ ಅರ್ಹತೆ ಪಡೆದ ರಾಜ್ಯಮಟ್ಟದ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪಿ.ಎ.ನಾಗೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ರಾಜ್ಯ ಪ್ರತಿನಿಧಿ ಪಿ.ಕೆ. ಜಗದೀಶ್ ಉಪಸ್ಥಿತರಿದ್ದರು.