ಇಫ್ತಾರ್ ಸ್ನೇಹ ಮಿಲನ
ಗೋಣಿಕೊಪ್ಪಲು, ಮೇ 25: ಎಲ್ಲಾ ಧರ್ಮಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆಗೆ ಪೂರಕ ವಾತಾವರಣ ಸೃಷ್ಟಿಯಾದಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸಬಹುದು ರಂಜಾನ್ ಪ್ರಯುಕ್ತ ನಡೆಯುವ ಇಫ್ತಾರ್ ಕೂಟಗಳಿಂದ ಪ್ರೀತಿ ವೃದ್ದಿಸುತ್ತದೆ ಎಂದು ನಿವೃತ್ತ ಕ್ಯಾಪ್ಟನ್ ಕಾಳಿಮಾಡ ರಾಣ ನಂಜಪ್ಪ ಹೇಳಿದರು. ಗೋಣಿಕೊಪ್ಪಲುವಿನ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಪ್ರಣವ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರಂಜಾನ್ ಪ್ರಯುಕ್ತ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ನಾವೆಲ್ಲರು ಬಳಸುವ ನೀರು, ಗಾಳಿ, ಬೆಳಕು, ಒಂದೇ ಆಗಿದೆ. ನಮ್ಮ ನಮ್ಮಲ್ಲಿ ಧರ್ಮದ ವಿಚಾರದಲ್ಲಿ ಕಂದಕಗಳು ನಿರ್ಮಾಣವಾಗಬಾರದು. ಎಲ್ಲರೊಂದಿಗೂ ಬೆರೆತು ಬಾಳಬೇಕು ಎಂದರು. ಕಾರ್ಯಕ್ರಮವನ್ನು ಅತ್ತೂರು ಗ್ರಾಮದ ಕಾಫಿ ಬೆಳೆಗಾರರಾದ ನಿವೃತ್ತ ಬ್ರಿಗೇಡಿಯರ್ ಚೆಪ್ಪುಡೀರ ಪೊನ್ನಪ್ಪ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಗಣಪತಿ, ಕ್ಯಾಥೋಲಿಕ್ ಚಾರಿಟೇಬಲ್ ಸೊಸೈಟಿಯ ಜಿಲ್ಲಾಧ್ಯಕ್ಷ ಪಿ.ಟಿ. ಸೈಮನ್ ಪಾಲ್ಗೊಂಡಿದ್ದರು.
ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ನಾವುಗಳು ಎಲ್ಲಾ ಧರ್ಮವನ್ನು ಗೌರವದಿಂದ ಕಂಡಾಗ ಬಾಂಧವ್ಯ ವೃದ್ಧಿಸಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದು ಜಿಲ್ಲಾ ದ.ಸಂ.ಸ. ಸಂಚಾಲಕ ಪರಶುರಾಮ್ ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಉದ್ದೇಶಿಸಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಶರತ್‍ಕಾಂತ್ ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಜಮಾಅತೆ ಇಸ್ಲಾಮೀ ಹಿಂದ್‍ನ ಕೇಂದ್ರಿಯ ಪ್ರತಿನಿಧಿ ಮಂಡಳಿಯ ಸದಸ್ಯ ಅಕ್ಬರಲಿ ರಂಜಾನ್ ಬಗ್ಗೆ ಮಾತನಾಡಿ, ಇಸ್ಲಾಂ ಮಾನವೀಯತೆಯ ಧರ್ಮವಾಗಿದ್ದು, ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಬಯಸುತ್ತದೆ ಎಂದರಲ್ಲದೆ, ಒಂದು ತಿಂಗಳ ಉಪವಾಸದ ಹಲವು ಪ್ರಯೋಜನಗಳನ್ನು ವಿವರಿಸಿದರು.
ಗೋಣಿಕೊಪ್ಪ ಹಿದಾಯತ್‍ನ ಅಧ್ಯಕ್ಷರಾದ ಕೆ.ಅಹಮ್ಮದ್ ಯುನೈಟೆಡ್ ಜಮಾಅತ್‍ನ ಅಧ್ಯಕ್ಷರಾದ ನಜೀರ್ ಅಹಮ್ಮದ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮೀ ಹಿಂದ್‍ನ ಪ್ರಮುಖರಾದ ಕೆ.ಟಿ. ಬಶೀರ್ ನಿರೂಪಿಸಿದರು .ವಕೀಲ ಸಮೀರ್ ಸ್ವಾಗತಿಸಿದರು ಮಹಮ್ಮದ್ ರಫೀ ಚಡ್‍ಖಾನ್ ವಂದಿಸಿದರು. ಆರಂಭದಲ್ಲಿ ಮೃತ ಪಟ್ಟ ಯೋಧರಿಗೆ ಮೌನ ಆಚರಣೆ ಮಾಡಲಾಯಿತು. ರಂಜಾನ್ ಪ್ರಯುಕ್ತ ನಾಗರಿಕರಿಗೆ ಉಟೋಪಚಾರ ನಡೆಯಿತು.