ಗೋಣಿಕೊಪ್ಪಲು, ಮೇ 25: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಯೋಜನೆ ವತಿಯಿಂದ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರದ ಕಾರ್ಯಕ್ರಮ ಪೊನ್ನಂಪೇಟೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜರುಗಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಿ.ವಿ. ಜಯಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಆರ್. ಸಂಪತ್ಕುಮಾರ್, ಗೋಣಿಕೊಪ್ಪ ವಾಹನ ಚಾಲಕ ಸಂಘದ ಉಪಾಧ್ಯಕ್ಷ ಪಿ.ಎಸ್. ಶರತ್ಕಾಂತ್, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಮುಖ್ಯಸ್ಥ ಡಾ. ಚಂದ್ರಶೇಖರ್, ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.
ಐದು ದಿನಗಳ ಶಿಬಿರದಲ್ಲಿ ಪುನರಾವಲೋಕನ, ದೈನಂದಿನ ಕಾರ್ಯಚಟುವಟಿಕೆಗಳು, ಒಳಾಂಗಣ ದೇಹ ರಕ್ಷಣಾ ವಿಧಾನ ಮತ್ತು ಸಹಾಯಕರ ಜೊತೆ ಓಡಾಡುವ ವಿಧಾನಗಳು, ಬಸ್ ನಿಲ್ದಾಣದಲ್ಲಿ ಓಡಾಡುವದು ಹಾಗೂ ಮಾರುಕಟ್ಟೆಯ ಪರಿಚಯ ಹಣ್ಣು ಮತ್ತು ತರಕಾರಿಗಳ ಹಾಗೂ ನೋಟುಗಳ ಪರಿಚಯ, ಪಾತ್ರೆ ತೊಳೆಯುವದು ಅಡುಗೆಗೆ ಸಹಾಯ ಮಾಡುವದು ತರಕಾರಿ ತೊಳೆಯುವದು ಸ್ವತಃ ಅಡುಗೆ ಮಾಡುವ ಬಗ್ಗೆ ವಿಶೇಷ ಚೇತನರಿಗೆ ಮಾಹಿತಿಗಳನ್ನು ನೀಡಲಾಗುವದು. ಜಿಲ್ಲೆಯ ವಿವಿಧ ಭಾಗದಿಂದ ಅನೇಕ ವಿಶೇಷಚೇತನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರಾರ್ಥಿ ದರ್ಶಿತ್ ಪ್ರಾರ್ಥಿಸಿದರು ಸುನಿತಾ ಸ್ವಾಗತಿಸಿದರು, ಬೋರಯ್ಯ ವಂದಿಸಿದರು.