ಮಡಿಕೇರಿ ಮೇ 25: ವೈಯಕ್ತಿಕ ಗೃಹ ಶೌಚಾಲಯ, ಸಮುದಾಯ ಶೌಚಾಲಯಗಳ ಬಳಕೆ, ಶಾಲೆ ಮತ್ತು ಅಂಗನವಾಡಿ ಶೌಚಾಲಯಗಳ ಸದ್ಬಳಕೆಗಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಜಲ ಸಂರಕ್ಷಣೆ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು ಜೂನ್ 11 ರಂದು ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಪ್ರತಿಯೊಂದು ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸ್ವಚ್ಛಮೇವ ಜಯತೆ ಆಂದೋಲನ ನಡೆಯಲಿದೆ.

ಈ ಕಾರ್ಯಕ್ರಮ ಜಿಲ್ಲೆಯಾದ್ಯಂತ ಜೂನ್ 11 ರಿಂದ ಜುಲೈ 9 ರವರೆಗೆ ನಿರಂತರವಾಗಿ ಗ್ರಾಮ ಮಟ್ಟದಲ್ಲಿ ನಡೆಯಲಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ಕೋರಿದ್ದಾರೆ.

ಜೂನ್ 11 ರಿಂದ ಜುಲೈ 10 ವರೆಗೆ ಆಂದೋಲನ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಠಿಯಿಂದ ಜಾಗೃತಿ ಮೂಡಿಸಲು ಸರ್ಕಾರವು ಸ್ವಚ್ಛಮೇವ ಜಯತೆ ಕಾರ್ಯಕ್ರಮವನ್ನು ರಾಜ್ಯಾದಂತ ಜಾರಿಗೊಳಿಸಿದ್ದು, ಇದನ್ನು ಜಿಲ್ಲೆಯ ಜನಪ್ರತಿನಿಧಿಗಳ ಸಂಘ-ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲು ಕೋರಿದ್ದಾರೆ.

ಇತ್ತೀಚೆಗೆ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ಕಸದ ಕೇಂದ್ರಗಳಾಗುತ್ತಿದೆ. ಇದನ್ನು ನಿಯಂತ್ರಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವದು ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಸಂಬಂಧ ಜಾಥಾ, ಶ್ರಮದಾನ, ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕುರಿತು ಚರ್ಚಾ ಸ್ಪರ್ಧೆ, ಪ್ರಬಂಧ ರಚನೆ, ಪ್ರತಿಜ್ಞಾವಿಧಿ ಬೋಧನೆ, ಬೇಸ್‍ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಕಾರ್ಯಾದೇಶದೊಂದಿಗೆ ವಿಶೇಷ ಗ್ರಾಮಸಭೆಗಳು ನಡೆಯಲಿದೆ.