ಬೆಂಗಳೂರು, ಮೇ.24: ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವದೇ ಪರಿಣಾಮ ಬೀರುವದಿಲ್ಲ, ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರೆಯುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ.ಇದಕ್ಕೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಪಕ್ಷದ ಸಚಿವರು, ಶಾಸಕರು ಸಮ್ಮತಿ ಸೂಚಿಸಿದ್ದಾರೆ ಎಂದರು.ಪ್ರತಿಪಕ್ಷ ಬಿಜೆಪಿಯ ಆಪÀರೇಷನ್ ಕಮಲ ಯಶಸ್ವಿ ಆಗೋದಿಲ್ಲ. ಸರ್ಕಾರ ಬೀಳಿಸುವ ಪ್ರಯತ್ನ ವಿಫಲ ಆಗಲಿದೆ. ರಾಜ್ಯಸರ್ಕಾರಕ್ಕೆ ಜನಾದೇಶ ಇದ್ದು, ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಗೆ ಅವಕಾಶ ನೀಡುವದಿಲ್ಲ ಎಂದು ಪರಮೇಶ್ವರ್ ಹೇಳಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಅನೌಪಚಾರಿಕ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು, ಇಂದಿನ ಸಭೆಯಲ್ಲಿ ಲೋಕಸಭಾ ಚುನಾವಣೆಯ ಒಟ್ಟಾರೆ ಫಲಿತಾಂಶ, ರಾಜ್ಯದ ಫಲಿತಾಂಶಗಳ ಕುರಿತು ಚರ್ಚೆ ಹಾಗೂ ವಿಶ್ಲೇಷಣೆ ನಡೆಸಲಾಯಿತು. ಲೋಕಸಭಾ ಚುನಾವಣೆ ಫಲಿತಾಂಶ ಕೇಂದ್ರ ಸರ್ಕಾರಕ್ಕೆ ನೀಡಿದ ಜನಾದೇಶವೇ ಹೊರತು ರಾಜ್ಯ ಸರ್ಕಾರಕ್ಕೆ ಅಲ್ಲ ಎಂದು ಸಚಿವ ಸಂಪುಟವು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿಸಿದರು. ಮೈತ್ರಿ ಸರ್ಕಾರವು ಮುಂದಿನ ನಾಲ್ಕು ವರ್ಷಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಲಿದೆ. ಜನತೆಗೆ ನಿರಾಶೆ ಮಾಡುವದಿಲ್ಲ ಎಂದು ನುಡಿದರು.
(ಮೊದಲ ಪುಟದಿಂದ) ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಗೃಹ ಸಚಿವ ಎಂಬಿ ಪಾಟೀಲ್, ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸುದ್ದಿಗೋಷ್ಠಿ ಸಂದರ್ಭ ಉಪಸ್ಥಿತರಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡದೆ ಮೌನವಾಗಿದ್ದರು. ಪತ್ರಕರ್ತರು ಪ್ರಶ್ನೆ ಕೇಳಿದರೂ ಉತ್ತರಿಸಲಿಲ್ಲ.
ರಾಹುಲ್ ಗಾಂಧಿ ಅಭಯ?
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ರಾಜೀನಾಮೆ ಮಾಹಿತಿ ತಿಳಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ತಕ್ಷಣವೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರವಾಣಿ ಕರೆಮಾಡಿ ಗೊಂದಲ ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಕುಮಾರಸ್ವಾಮಿ ಅವರಿಗೆ “ನೀವೇ ಮುಖ್ಯ ಮಂತ್ರಿಯಾಗಿ ಮುಂದುವರೆ ಯಿರಿ. ಸಂಕಷ್ಟದ ಪರಿಸ್ಥಿತಿಯಲ್ಲಿ ದಿಢೀರ್ ಬೆಳವಣಿಗೆ ನಡೆದರೆ ಬಿಜೆಪಿ ಅದರ ಲಾಭ ಪಡೆಯುವ ಸಂಚು ನಡೆಸಬಹುದು.ಇದರಿಂದ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮನವರಿಕೆ ಮಾಡಿ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಮೇಲೆ ವಿಶ್ವಾಸವಿರಿಸಿ ದ್ದಾರೆ ಎಂಬ ಸಂದೇಶ ರವಾನಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ರಾಹುಲ್ ಗಾಂಧಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಅಂತೆಯೇ ಕಾಂಗ್ರೆಸ್ ಸಚಿವರು ಪ್ರತ್ಯೇಕ ಸಭೆ ಸೇರಿ ಮುಖ್ಯ ಮಂತ್ರಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿತ್ತು.
ಬೆಳಿಗ್ಗೆ ಪರಮೇಶ್ವರ್ ಮನೆಯಲ್ಲಿ ಉಪಹಾರ ಕೂಟದ ನೆಪದಲ್ಲಿ ಸಭೆ ಸೇರಿದ ಕಾಂಗ್ರೆಸ್ ಸಚಿವರು ಮುಖ್ಯಮಂತ್ರಿ ಮೇಲೆ ಪೂರ್ಣ ವಿಶ್ವಾಸವಿದೆ.ಮೈತ್ರಿ ಮುಂದುವರೆಸಲು ನಮ್ಮ ಆಕ್ಷೇಪವಿಲ್ಲ ಎಂಬ ಸಂದೇಶ ನೀಡಿದರು. ಇದರಿಂದಾಗಿ ಮುಖ್ಯಮಂತ್ರಿ ರಾಜೀನಾಮೆ ಗೊಂದಲಕ್ಕೆ ತೆರೆ ಬಿದ್ದಿತು. ಅಲ್ಲದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸಚಿವರುಗಳು ,ಶಾಸಕರು ,ಮೈತ್ರಿ ಸರ್ಕಾರದ ಮೇಲೆ ಅನವಶ್ಯಕ ಆರೋಪ, ದೂರು , ಮುಖ್ಯಮಂತ್ರಿ ಬದಲಾವಣೆಯಂತಹ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಸಚಿವರಿಗೆ ಖಡಕ್ ಸಂದೇಶ ನೀಡಿದ್ದಾರೆ. ಅಂತೆಯೇ ಜೆಡಿಎಸ್ ಸಚಿವರು ,ಶಾಸಕರು ಸಹ ಇದೇ ನೀತಿಯನ್ನು ಅನುಸರಿಸಿ ಪಾಲಿಸುವಂತೆಯೂ ಸೂಚನೆ ನೀಡಿದ್ದಾರೆ. ಮಹತ್ವದ ಸಭೆ, ಪಕ್ಷ ಹಾಗೂ ಸರ್ಕಾರದ ಗೊಂದಲಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವದಕ್ಕೆ ಸದ್ಯಕ್ಕೆ ತಡೆಬಿದ್ದಿದೆ.