ಗೋಣಿಕೊಪ್ಪ ವರದಿ, ಮೇ 24: ಗುರುವಾರ ರಾತ್ರಿ ಸುರಿದ ಮಳೆ, ಗಾಳಿ ಹಾಗೂ ಗುಡುಗಿನೊಂದಿಗೆ ಲಘು ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 3 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರನ್ನು ಬೆಚ್ಚಿ ಬೀಳಿಸಿತು. ಕುರ್ಚಿ ಗ್ರಾಮದಲ್ಲಿ ಹೆದರಿ ಮನೆಯಿಂದ ಹೊರ ಬಂದು ನಂತರ ಮನೆ ಸೇರಿಕೊಂಡ ಘಟನೆ ಕೂಡ ನಡೆಯಿತು.ದಕ್ಷಿಣ ಕೊಡಗಿನಲ್ಲಿ ಸಂಜೆ 6.45 ರಿಂದ ರಾತ್ರಿ 10 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ಹಂತ ಹಂತವಾಗಿ ಭೂಕಂಪನದ ಅನುಭವವಾಗಿರುವ ಬಗ್ಗೆ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.ಪೊನ್ನಂಪೇಟೆ, ಮತ್ತೂರು, ಬಾಳಾಜಿ ಗ್ರಾಮಗಳಲ್ಲಿ ಸಂಜೆ 7ರ ಸುಮಾರಿಗೆ ಮಿಂಚು, ಗುಡುಗಿ ನೊಂದಿಗೆ ಭೂಮಿ ನಡುಗಿದೆ. ಸುಮಾರು 30 ಸೆಕೆಂಡ್‍ಗಳ ಕಾಲ ಭೂಮಿಯಲ್ಲಿ ಭಯಾನಕ ಶಬ್ದ ಕೇಳಿ ಬಂದಿದೆ. ಮನೆಯ ವಸ್ತುಗಳು ಕೂಡ ಅಲುಗಾಡಿದೆ. ಇದೇ ರೀತಿ, ಕಾನೂರು, ಬಾಳೆಲೆ, ಮಾಯಮುಡಿ, ನಾಲ್ಕೇರಿ, ಕಳತ್ಮಾಡ್, ಕೋಟೂರು, ಬಲ್ಯಮುಂಡೂರು, ತೂಚಮಕೇರಿ, ಕುಮಟೂರು, ಗೋಣಿಕೊಪ್ಪ, ತೆರಾಲು ಸುತ್ತಮುತ್ತ ಗ್ರಾಮದ ಜನತೆ ಅನುಭವ ಹಂಚಿಕೊಂಡಿದ್ದಾರೆ. ನಾಲ್ಕೇರಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಬಾಳೆಲೆಯಲ್ಲಿ ಬೇಕರಿ ಕಟ್ಟಡದ ಗೋಡೆ ಬಿರುಕು ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕುರ್ಚಿ ಗ್ರಾಮದಲ್ಲಿ ರಾತ್ರಿ 9.45 ಸುಮಾರಿಗೆ ನಡುಗಿದ ಅನುಭವದಿಂದ ಹೆದರಿ ಕಾಫಿ ಬೆಳೆಗಾರ ಅಜ್ಜಮಾಡ ಕುಶಾಲಪ್ಪ ಹಾಗೂ ಅವರ ಕುಟುಂಬ ಮನೆಯಿಂದ ಹೊರ ಬಂದು, ನಂತರ ಮನೆ ಸೇರಿಕೊಂಡರು. ಒಂದೆರಡು ನಿಮಿಷಗಳ ಕಾಲ ಭೂಮಿಯಲ್ಲಿ ಶಬ್ಧ ಬಂದಿದೆ. ಮನೆಯ ವಸ್ತುಗಳು ಕೂಡ ಅಲುಗಾಡಿದೆ. ಇದರಿಂದ ಏನು ಎಂದು ತಿಳಿಯದೆ ಮನೆಯಲ್ಲಿದ್ದವರು ಮನೆಯಿಂದ ಹೊರ ಬಂದಿದ್ದೆವು; ನಂತರ ಮನೆಗೆ ಸೇರಿಕೊಂಡೆವು ಎಂದು ಕುಶಾಲಪ್ಪ ಮಾಹಿತಿ ನೀಡಿದ್ದಾರೆ.
ಸಿಡಿಲಿಗೆ ಹಾನಿ
ಬಲ್ಯಮುಂಡೂರು ತಾವರೆಕೆರೆ ರಸ್ತೆಯ ವ್ಯಾಪ್ತಿಯಲ್ಲಿ ಗುಡುಗು - ಮಿಂಚಿಗೆ ಭೂಮಿಯ ಕುರುಚಲು ಕಾಡು 50 ಮೀಟರ್ ಅಗಲದಷ್ಟು ಬೆಂದು ಹೋಗಿದೆ. ಕಾಂಕ್ರಿಟ್ ರಸ್ತೆ, ವಿದ್ಯುತ್ ಕಂಬದಲ್ಲಿನ ಕಾಂಕ್ರಿಟ್ ಕಿತ್ತು ಬಂದಿದೆ. ಬಲ್ಯಮುಂಡೂರು ಗ್ರಾಮ ಪಂಚಾಯ್ತಿಯ
(ಮೊದಲ ಪುಟದಿಂದ) ನೀರೆತ್ತುವ ಪಂಪ್ ಸೆಟ್ ಸುಟ್ಟು ಹೋಗಿದೆ. ಗ್ರಾಮದ ಬಹುತೇಕ ಮನೆಗಳ ಎಲೆಕ್ಟ್ರಿಕ್ ವಸ್ತುಗಳು ಸುಟ್ಟಿವೆ.
ಮರಗೋಡಿನಲ್ಲಿ
ಮರಗೋಡು ಹಾಗೂ ಕಟ್ಟೆಮಾಡು ವ್ಯಾಪ್ತಿಯಲ್ಲಿಯೂ ನಿನ್ನೆ ರಾತ್ರಿ 8.45ರ ವೇಳೆಗೆ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಗುಡುಗಿದ ಹಾಗೆ ಸದ್ದಿನೊಂದಿಗೆ ಮನೆಯೊಳಗಿದ್ದ ಪಾತ್ರೆಗಳು ಸದ್ದು ಮಾಡಿದ ಹಾಗೆ ಅನುಭವವಾಗಿದೆ ಎಂದು ಕಟ್ಟೆಮಾಡು ನಿವಾಸಿ ಕಟ್ಟೆಮನೆ ರೋಶನ್ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಭೇಟಿ
ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಲಘು ಭೂಕಂಪನ ಆಗಿದೆ ಎನ್ನಲಾದ ಮನೆಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲ್ಯಹುದಿಕೇರಿಯಲ್ಲಿ ಗುರುವಾರ ರಾತ್ರಿ ಗುಡುಗು, ಮಿಂಚು ಸಹಿತ ಮಳೆ ಬಂದ ಸಂದರ್ಭದಲ್ಲಿ ಲಘು ಭೂಕಂಪನದ ಅನುಭವ ಹೊಂದಿದ ಅಂತಪ್ಪ ಎಂಬವರ ಮನೆಗೆ ಜಿಲ್ಲಾ ಉಪವಿಭಾಗಾಧಿಕಾರಿಯವರ ಆದೇಶದ ಮೇರೆಗೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಭೇಟಿ ನೀಡಿ ಅಂತಪ್ಪನವ ರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಅಂತಪ್ಪನವರು ಗುಡುಗಿನ ಸದ್ದಿನೊಂದಿಗೆ ಮನೆಯ ಮೇಲ್ಛಾವಣಿಯ ಶೀಟ್ ಹಾಗೂ ಮನೆಯ ಒಳಗಿನ ಗಾಡ್ರೇಜ್ ಅಲುಗಾಡಿದ ಹಾಗೆ ಅನಿಸಿತು. ಒಂದು ಸೆಕೆಂಡ್‍ಗಳಷ್ಟು ಇತ್ತು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಕಂದಾಯ ಪರಿವೀಕ್ಷಕ ಅನಿಲ್ ಮಾತನಾಡಿ ಗುಡುಗು ಹಾಗೂ ಮಿಂಚು ಸೇರಿ ಮಳೆ ಬಂದ ಸಂದರ್ಭದಲ್ಲಿ ಈ ರೀತಿ ಅನುಭವ ಆಗಿರಬಹುದೆಂದು ಶಂಕಿಸಿದ್ದಾರೆ. ಭೂಕಂಪಿಸಿದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಸಿಬ್ಬಂದಿ ಶಿವಕುಮಾರ್, ಗ್ರಾಮ ಸಹಾಯಕ ಕೃಷ್ಣನ್‍ಕುಟ್ಟಿ ಹಾಜರಿದ್ದರು.