ಅನುಭವ, ವಿಚಾರ, ಹಲವು ತರದ ವಿಷಯಗಳನ್ನರಿಯಲು ಪುಸ್ತಕಗಳೇ ಆಧಾರ. ಪುಸ್ತಕಗಳ ಜ್ಞಾನದ ನೀರನ್ನು ಎಲ್ಲಾ ದಿಕ್ಕುಗಳಿಗೂ ಹಿರಿಯ ಬಿಡುತ್ತದೆ. ಪುಸ್ತಕ ಆತ್ಮೀಯ ಸ್ನೇಹಿತರಂತೆ.
ತನ್ನ ಸುತ್ತಮುತ್ತಲಿನ ವಿಷಯಗಳನ್ನು, ಆಗು ಹೋಗುಗಳ ಅರಿವನ್ನು ತಿಳಿಸುವದೇ ಪುಸ್ತಕಗಳು. ಪುಸ್ತಕ ಓದುವದರಿಂದ ಜ್ಞಾನವು ಲಭಿಸುವದು. ಜ್ಞಾನಕ್ಕಿಂತ ಮಿಗಿಲಾದುದು ಯಾವದೂ ಇಲ್ಲ. ಜ್ಞಾನಾರ್ಜನೆಗೆ, ಮನರಂಜನೆಗೆ, ಸಮಯ ಕಳೆಯಲು ಪುಸ್ತಕ ಅಧ್ಯಯನ ಅತ್ಯಗತ್ಯ. ಓದುವದು, ಬರೆಯುವದು ಒಂದು ಕಲೆ. ನಮ್ಮ ದೈನಂದಿನ ಕೆಲಸಗಳ ನಡುವೆ ಒತ್ತಡಗಳ ಒದ್ದಾಟದಿಂದ ಬಳಲುವಾಗ ಮುಕ್ತಿ ಪಡೆಯಲು ಪುಸ್ತಕಗಳು ನೆರವಾಗುವದು. ಆದರಿಂದ ಮನಸ್ಸಿನ ದುಗುಡ, ಒತ್ತಡಗಳು ನಿವಾರಣೆ ಆಗುವದು. ನಮ್ಮ ಬುದ್ದಿಯು ಚುರುಕಾಗುವದು ಮತ್ತು ಮಾನಸಿಕ ಶಾಂತಿ ಲಭಿಸುವದು.
ಒಳ್ಳೆಯ ಪುಸ್ತಕ ಓದುವದರಿಂದ ನಮ್ಮ ಬದುಕಿನ ದಿಕ್ಕನ್ನೇ ಅದು ಬದಲಾಯಿಸುವದು. ಉತ್ತಮ ಪುಸ್ತಕ ಒಳ್ಳೆಯ ಬದುಕನ್ನು ನೀಡುವದು. ಓದುವ, ಬರೆಯುವ ಅಭ್ಯಾಸದಿಂದ ಮನಸ್ಸಿಗೆ ಹೊಸ ಹೊಸ ವಿಚಾರಧಾರೆಗಳು ಹೊಳೆಯುತ್ತವೆ. ಸೃಜನಶೀಲತೆ ಬೆಳೆಯುತ್ತದೆ. ಭಾಷಾ ಕೌಶಲ್ಯ ಅಭಿವೃದ್ಧಿ ಆಗುತ್ತದೆ. ಜ್ಞಾನವು ಅಭಿವೃದ್ಧಿ ಆಗಿ ಒಳ್ಳೆಯದು ಯಾವದು ಕೆಟ್ಟದ್ಯಾವದು ಎನ್ನುವ ವಿಚಾರಧಾರೆಗಳು ಮನಸ್ಸಿನಲ್ಲಿ ಮೂಡುತ್ತದೆ. ಓದುವ ಹವ್ಯಾಸ ಬೆಳೆಸಿಕೊಂಡರೆ ಬದುಕಲ್ಲಿ ಆ ಉತ್ಸಾಹ ಎಂದಿಗೂ ಭತ್ತದು. ಓದುವ ಅಭ್ಯಾಸದಿಂದ ಸಾಧನೆಯ ಉತ್ತುಂಗಕ್ಕೆ ಏರಬಹುದು.
ಮಾನವ ದಿನನಿತ್ಯ ತನ್ನ ದೈನಂದಿನ ಕಾರ್ಯಕ್ರಮವನ್ನು ಮಾಡುತ್ತಲೇ ಇರುವನು. ಅದರಲ್ಲಿ ದಿನದ ಒಂದು ಗಂಟೆ ಸತತ ಓದುವದರಿಂದ ಕಠಿಣವಾದ ಪದದ ಶಬ್ದ, ಉದ್ದೇಶ ಅರ್ಥವಾಗುವದು. ಬದುಕಿನ ಹಲವು ಅಂಶಗಳು ತಿಳಿಯುವದು.
ಅಂಬೇಡ್ಕರ್, ವಿವೇಕಾನಂದರು, ಮಹಾತ್ಮ ಗಾಂಧೀಜಿಯವರು ಸತತ ಓದುವಿಕೆಯಿಂದ ಜಗತ್ತಿನಲ್ಲಿ ಶ್ರೇಷ್ಠರೆಂದೆನಿಸಿದರು. ಬಡವ - ಶ್ರೀಮಂತರೆಂಬ ಬೇಧವಿಲ್ಲದೆ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಪುಸ್ತಕ ಖರೀದಿಸಿ ಓದುವದು ದುಬಾರಿ ಏನಲ್ಲ. ಪತ್ರಿಕೆ, ಪುಸ್ತಕ ಯಾರು ಬೇಕಾದರೂ ಓದಬಹುದು. ಓದುವ ಅಭ್ಯಾಸಕ್ಕಿಂತ ಉತ್ತಮ ಹವ್ಯಾಸ ಬೇರೊಂದಿಲ್ಲ. ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಸ್ನೇಹಿತರೊಡನೆ ಕಷ್ಟ-ಸುಖ ಹಂಚಿಕೊಂಡಾಗ ಮನಸ್ಸು ಹಗುರ ಎನಿಸುವದು. ಹೊಸ ಅನುಭವ ಉಂಟಾಗುವದು. ಪುಸ್ತಕವನ್ನು ಪ್ರೀತಿಸಿದರೆ ಸಮಯದ ಕೊರತೆ ನೀಗುವದು. ನಿದ್ರೆಯಿಲ್ಲದೆ ಬಳಲುವವರಿಗೆ ಓದುವ ಅಭ್ಯಾಸದಿಂದ ನಿದ್ರೆ ತಾನಾಗಿಯೇ ಬರುವದು.
ಪುಸ್ತಕ ಓದುವದರಿಂದ ಭಾಷೆಯ ಸೊಗಡು ಅರಿವಾಗುವದು. ಹೊಸ ವಿಷಯಗಳತ್ತ ಮನಸ್ಸು ಚಲಿಸುವದು. ಬದಲಾಗುತ್ತಿರುವ ಜೀವನ ಶೈಲಿ, ಬದುಕಿನ ಅನಾವರಣಗಳ ಪರಿಚಯ ಆಗುವದು.
ಲೇಖಕರು ಬರೆದ ಪುಸ್ತಕಗಳನ್ನು ತೆಗೆದು ಅಭಿಮಾನದಿಂದ ಓದಿದರೆ ಅದನ್ನು ಬರೆದಿದ್ದಕ್ಕೂ ಸಾರ್ಥಕವೆಂದು ಅವರಿಗೆ ಅನಿಸುವದು. ಅವರಿಗೂ ಬರೆಯಲು ಸ್ಪೂರ್ತಿ ಸಿಕ್ಕಂತೆ ಆಗುವದು. ಕೆಲವರಿಗೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸವೇ ಇಲ್ಲ. ಅಂತವರಿಗೆ ಪುಸ್ತಕಗಳನ್ನು ಉದಾರವಾಗಿ ನೀಡಿದರೂ ಪ್ರಯೋಜನವಿಲ್ಲ. ಅದನ್ನು ಮೂಲೆಗೆ ಬಿಸಾಕಿ ಕೈತೊಳೆದು ಕೊಳ್ಳುವದು. ಇಂದಿನ ಆಧುನಿಕ ಯುಗದಲ್ಲಿ ಪುಸ್ತಕ, ಪತ್ರಿಕೆಗಿಂತ ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾಗಿ ಕಂಡುಬರುವದು. ಇಂಟರ್ನೆಟ್ನತ್ತ ಯುವ ಜನರು ಪುಸ್ತಕಗಳಿಂದ ದೂರ ಸರಿಯುತ್ತಿರುವದು. ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿ ಎಂದರಿತ್ತಿದ್ದರೂ ಅದರಿಂದ ದೂರ ಸರಿಯುತ್ತಿಲ್ಲ. ಮಕ್ಕಳಿಗೆ ಪೋಷಕರು ಚಿಕ್ಕಂದಿನಲ್ಲಿಯೇ ಓದುವ, ಬರೆಯುವ ಹವ್ಯಾಸವನ್ನು ಮನೆಯಲ್ಲಿ ಅಭ್ಯಾಸ ಮಾಡಿಸಬೇಕು. ಶಾಲೆಯಲ್ಲಿ ಶಿಕ್ಷಕರು ಅರಿವು ಮೂಡಿಸಬೇಕು.
ಕೆಲವರು ಓದುವದು, ಬರೆಯುವದು, ಪುಸ್ತಕ ಸಂಗ್ರಹ ಮಾಡುವದನ್ನು ಹವ್ಯಾಸವಾಗಿ ಬೆಳೆಸಿಕೊಂಡಿರುವರು. ಎಲ್ಲರೂ ಓದುವ ಅಭ್ಯಾಸ ಮಾಡಬೇಕು. ಪುಸ್ತಕ ಕಡಿಮೆ ಬೆಲೆಗೆ ಮಾರಾಟವಾದರು, ಪುಕ್ಕಟೆ ಓದಿ ಎಂದು ಕೊಟ್ಟರು ತೆಗೆದುಕೊಳ್ಳುವ ಜನರು ಕಡಿಮೆ. ಓದುವ ಅಭ್ಯಾಸದಿಂದ ಸಿಗುವ ತೃಪ್ತಿ ಮತ್ತೊಂದಿಲ್ಲ. ವಿದ್ಯಾರ್ಥಿಗಳು ಶಾಲೆಯ ಪಠ್ಯಪುಸ್ತಕವಲ್ಲದೆ ಒಳ್ಳೆಯ ಇತರ ಪುಸ್ತಕಗಳನ್ನೂ, ಕತೆ, ಕವನ, ನೀತಿ ಕತೆಯ ಪುಸ್ತಕಗಳನ್ನು ಓದಿ ಆತ್ಮೀಯರೊಡನೆ ಚರ್ಚಿಸಿ ಇತರರಿಗೆ ಮಾರ್ಗದರ್ಶನ, ತಿಳುವಳಿಕೆ ನೀಡುವಂತಾಗಬೇಕು. ಪುಸ್ತಕಗಳನ್ನು ಗೌರವಿಸುವ ಮನೋಭಾವ ಎಲ್ಲರಿಗೂ ಇರಬೇಕು. ಮಹಾ ವ್ಯಕ್ತಿಗಳ ಜೀವನ ಚರಿತ್ರೆ ಓದು ಹೊಸ ಹುರುಪು, ಚೈತನ್ಯ ಪಡೆಯಬಹುದು. ಪುಸ್ತಕವನ್ನು ಜೋಪಾನ ಮಾಡುವದನ್ನು ಕಲಿತಿರಬೇಕು. ಮನೆಯಲ್ಲಿ ಪುಸ್ತಕಗಳಿರಲೇಬೇಕು. ಪುಸ್ತಕವಿಲ್ಲದ ಮನೆ ದೇವರಿಲ್ಲದ ಗುಡಿ.
- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.