ಸೋಮವಾರಪೇಟೆ, ಮೇ 24: ಸಮೀಪದ ಹಾನಗಲ್ಲು ಗ್ರಾಮ ವ್ಯಾಪ್ತಿಯ ದುದ್ದುಗಲ್ಲು ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಡಿವೈಎಸ್ ಪಿ ನೇತೃತ್ವದ ತಂಡ, ಟಿಪ್ಪರ್ ವಾಹನ ಸಹಿತ ಮರಳು ಸೇರಿದಂತೆ ಎರಡು ಬೆಂಗಾವಲು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ತಡರಾತ್ರಿ ಹೊಳೆಯಿಂದ ಟಿಪ್ಪರ್‍ನಲ್ಲಿ ಮರಳು ತುಂಬಿಸಿ ಸಾಗಿಸುತ್ತಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿದ್ದು, ಈ ಸಂದರ್ಭ ಆರೋಪಿಗಳಾದ ಸುಜಿತ್, ಗಣೇಶ್, ಹಾನಗಲ್ಲು ಸುಜಿತ್ ಅವರುಗಳು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಬೆಂಗಾವಲಿಗಾಗಿ ಇರಿಸಿಕೊಂಡಿದ್ದ ಆಲ್ಟೋ ಕಾರು ಹಾಗೂ ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ದಿನಕರ್ ಶೆಟ್ಟಿ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್‍ರಾಜ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.