ಗೋಣಿಕೊಪ್ಪ ವರದಿ, ಮೇ 23: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಂತ್ರಿಕ ಮೇಳದಲ್ಲಿ ಯುವ ವಿಜ್ಞಾನಿಗಳ ಅನ್ವೇಷಣೆ ಬದಲಾಗುತ್ತಿರುವ ತಂತ್ರಜ್ಞಾನದ ಅರಿವು ಮೂಡಿಸಿತು. ಮೆಕಾನಿಕಲ್, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಿವಿಲ್ ಇಂಜಿನಿಯರ್ ವಿಭಾಗದಲ್ಲಿ ಕಲ್ಪನೆಗಳು ಮಾದರಿಗಳ ಮೂಲಕ ಅನಾವರಣಗೊಂಡಿತು. ಭವಿಷ್ಯದಲ್ಲಿ ದುಡಿಯುವ ಕೈ ಕಡಿಮೆಯಾದರೂ ತಂತ್ರಜ್ಞಾನದ ಮೂಲಕ ಕೃಷಿ, ಮನೆ ನಿರ್ವಹಣೆ, ಟ್ರಾಫಿಕ್, ಹಣ ವರ್ಗಾವಣೆ ಎಲ್ಲವೂ ಕೂಡ ಸುಲಲಿತವಾಗಿ ನಡೆಸಬಹುದು ಎಂಬದನ್ನು ಯುವ ವಿಜ್ಞಾನಿಗಳು ಅನಾವರಣಗೊಳಿಸಿದರು.

ಕಂಪ್ಯೂಟರ್ ವಿಭಾಗದಲ್ಲಿ ಟ್ರಾಫಿಕ್ ವಾಹನ ದಟ್ಟಣೆ ನಿಗಾ ತಂತ್ರಜ್ಞಾನ ಮಾದರಿ ಗಮನ ಸೆಳೆಯಿತು. ಪಟ್ಟಣಗಳ ಮುಖ್ಯ ವೃತ್ತಗಳಲ್ಲಿ ಟ್ರಾಫಿಕ್ ಇಲ್ಲದಿದ್ದರೂ ಸುಮ್ಮನೆ ಸಿಗ್ನಲ್ ಬರುವವರೆಗೂ ಸಮಯ ವ್ಯರ್ಥ ಆಗುವದನ್ನು ನಿಯಂತ್ರಿಸಲು ವೃತ್ತಗಳಲ್ಲಿ ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳಿರುತ್ತದೋ ಆ ರಸ್ತೆ ಮಾರ್ಗದಲ್ಲಿ ವಾಹನ ಸಾಗುವಂತೆ ಅನುವು ಮಾಡಿಕೊಡಲಾಗಿದೆ. ವಾಹನ ಕಡಿಮೆ ಇರುವ ರಸ್ತೆಗಳ ವಾಹನಗಳು ನಿಲ್ಲುವಂತೆ ಮಾಡಿ ದಟ್ಟಣೆ ಇರುವ ರಸ್ತೆಯ ವಾಹನಗಳನ್ನು ಮುಂದೆ ಸಾಗುವಂತೆ ಮಾಡಲಾಗಿದೆ. ಸಾಮಾನ್ಯವಾಗಿ ಕೆಂಪು ದೀಪ ಆರುವವರೆಗೂ ಕಾಯುವ ಸ್ಥಿತಿ ಇಲ್ಲಿಲ್ಲ. ಸಮಯ ವ್ಯರ್ಥವಿಲ್ಲ. ಸೆನ್ಸರ್ ಬಳಕೆ ಮೂಲಕ ಟ್ರಾಫಿಕ್ ನಿರ್ವಹಣೆಯಾಗಲಿದೆ. ವಾಹನಗಳ ಸಂಖ್ಯೆಗಳ ಲೆಕ್ಕಗಳನ್ನು ಕೂಡ ಇನ್ಪಾರೆಟ್ ಸೆನ್ಸರ್ ಮಾಡಬಹುದಾಗಿದೆ. ಎನ್. ಆರ್. ನವೀನ್, ಕೆ.ಕೆ. ತಿಮ್ಮಯ್ಯ, ಟಿ. ವಿ. ವಿಘ್ನೇಶ್, ಆರ್. ವಿಕಾಸ್ ತಂಡ ಈ ತಂತ್ರಜ್ಞಾನವನ್ನು ಅನಾವರಣಗೊಳಿಸಿದರು.

ವಿಶೇಷ ಚೇತನರು ಕೂಡ ಮೊಬೈಲ್ ಮೂಲಕ ಮನೆಯ ನಿರ್ವಹಣೆ ಮಾಡುವ ವಿಧಾನ ಗಮನ ಸೆಳೆಯಿತು. ಮೊಬೈಲ್‍ನಲ್ಲಿ ನಾವು ಹೇಳುವ ಮಾತಿನಂತೆ ಗಾಲಿಕುರ್ಚಿಯಲ್ಲಿ ಸುತ್ತಾಡುವದು, ಮನೆಯ ನಿರ್ವಹಣೆ ಬಗ್ಗೆ ಮೇಘ, ಅಕ್ಷತಾ, ಸ್ಪೂರ್ತಿ ತಮ್ಮ ತಂತ್ರಜ್ಞಾನದ ಮೂಲಕ ಅರಿವು ಮೂಡಿಸಿದರು. ಕಸ ಹೆಕ್ಕಲು ರೋಬೊಟ್ ಬಳಕೆ. ಒಣ ಹಾಗೂ ಹಸಿಕಸವನ್ನು ಹೆಕ್ಕಿ ಪ್ರತ್ಯೇಕವಾಗಿ ಬೇರ್ಪಡಿಸಲಿದೆ ಎಂಬದನ್ನ ಕಾವೇರಿ, ಮಂದಣ್ಣ, ರುಶ್ವಿಕ್ ಅನಾವರಣಗೊಳಿಸಿದರು.

ಸಿವಿಲ್ ಇಂಜಿನಿಯರ್ ವಿಭಾಗದ ಧೀರಜ್ ಶೇಟ್, ಯಶಸ್ಸ್ ಪಟೇಲ್, ಪವನ್, ಸುಷ್ಮಾ ಕೈಚಳಕದಲ್ಲಿ ನ್ಯಾನೋಗ್ರಫಿ ಮನೆ ನಿರ್ಮಾಣ ತಂತ್ರಜ್ಞಾನ ಮೂಡಿಬಂತು. ಕಟ್ಟಡ ನಿರ್ಮಾಣ ಸಂದರ್ಭ ಭಾರವಾದ ಕಾಂಕ್ರಿಟ್ ತೂಕ ತಪ್ಪಿಸಲು ಕಲ್ಲುಗಳಲ್ಲಿ ನ್ಯಾನೋ ಟೆಕ್ನಾಲಜಿ ಬಳಕೆ ಮಾಡಿಕೊಂಡು ಸಾಮಾನ್ಯವಾಗಿ ದೊರೆಯುವ ಕಲ್ಲುಗಳನ್ನು ಕೆಮಿಕಲ್ ಮೂಲಕ ಹಗುರಗಳಿಸಿ, ನ್ಯಾನೋಗ್ರಫಿ ಮೂಲಕ ಕಲ್ಲುಗಳಿಗೆ ಬಲ ತುಂಬುವ ತಂತ್ರಜ್ಞಾನ ತೋರಿಸಿಕೊಟ್ಟರು.

ನೀರು ಇಂಗಲು ಪೂರಕವಾದ ಪರ್ಫೇಸ್ ಕಾಂಕ್ರಿಟ್ ತಂತ್ರಜ್ಞಾನವನ್ನು ಆಕಾಶ್, ಚಂದನ್, ರಾಘವೇಂದ್ರ, ಸಂಗೀತ ಅನಾವರಣಗೊಳಿಸಿದರು. ಮರಳು ಬಳಕೆ ಇಲ್ಲದೆ ಎಂ. ಸ್ಯಾಂಡ್ ಮೂಲಕ ನಿರ್ಮಾಣ, ಇಟ್ಟಿಗೆಯ ಸುತ್ತಲೂ ರಂಧ್ರಗಳಿರುವದರಿಂದ ಹರಿಯುವ ನೀರನ್ನು ಇಟ್ಟಿಗೆ ಹೀರಿಕೊಳ್ಳುವದರಿಂದ ಭೂಮಿ ಯಲ್ಲಿನ ನೀರಿನ ಅಂಶ ಕಾಪಾಡಿ ಕೊಳ್ಳಲು ಸಹಕಾರಿಯಾಗುವ ಬಗ್ಗೆ ಅವರುಗಳು ಮಾಹಿತಿ ನೀಡಿದರು. ಮೆಕ್ಯಾನಿಕಲ್ ವಿಭಾಗ ದಲ್ಲಿ ಮಾನವನ ಸಹಕಾರವಿಲ್ಲದೆ ತೋಟಕ್ಕೆ ಹಾಯಿಸುವ ಎರಡು ವಿಧಾನಗಳು ಗಮನ ಸೆಳೆಯಿತು. ಆಂಡ್ರಾಯಿಡ್ ಮತ್ತು ಎಲೆಕ್ಟ್ರಿಕ್ ಮೂಲಕ ಮುನ್ನಡೆಸುವ ವಿಧಾನ ಗಮನ ಸೆಳೆದವು.

ಆಂಡ್ರಾಯ್ಡ್ ತಂತ್ರಜ್ಞಾನದ ಮೂಲಕ ತೋಟಗಾರಿಕಾ ನಿರ್ವಹಣೆ ತಂತ್ರಜ್ಞಾನವನ್ನು ಅರ್ಪಿತಾ, ಚರಿತಾ, ರಮ್ಯ, ಕಿರಣ್ ತಂಡ ಅನಾವರಣ ಗೊಳಿದರು. ಆಡ್ರಾಯ್ಡ್ ಮೂಲಕ ಗಿಡಕ್ಕೆ ಬರುವ ಕಾಯಿಲೆಗಳನ್ನು ಚಿತ್ರೀಕರಿಸಿ, ರೋಗದ ಬಗ್ಗೆ ಮಾಹಿತಿ, ಬಳಸಬೇಕಾದ ಔಷಧಿಗಳ ಮಾಹಿತಿ ನೀಡಲಿದೆ. ಅದರಂತೆ ಮಣ್ಣಿನಲ್ಲಿರುವ ನೀರಿನ ಅಂಶ ಪತ್ತೆ ಹಚ್ಚಿ ಬೇಕಾದಷ್ಟು ನೀರನ್ನು ಕೆರೆ ಅಥವಾ ಹೊಂಡಗಳಿಂದ ಸಿಂಪಡಣೆ ಮಾಡಿಕೊಳ್ಳುವ ವಿಧಾನವನ್ನು ಕೂಡ ಇವರು ಅನಾವರಣಗಳಿಸಿದರು.ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಕೂಡ ಮಣ್ಣಿನ ನೀರಿನ ಅಂಶ ಪತ್ತೆ ಹಚ್ಚಿಕೊಂಡು ನೀರು ಹಾಯಿಸುವ ವಿಧಾನ ಅನಾವರಣ ಗೊಂಡಿತು. ಮಣ್ಣಿನಲ್ಲಿ ನೀರು ಬತ್ತಿದಂತೆ ಅದಕ್ಕೆ ಬೇಕಾದ ನೀರಿನ ಅಂಶದ ಬಗ್ಗೆ ಮಾಹಿತಿ ನೀಡಿ, ನೀರು ಹಾಯಿಸಿಕೊಳ್ಳುವ ವಿಧಾನ ವಿಶೇಷವಾಗಿತ್ತು.

ತೋಟಗಳಲ್ಲಿ ನೀರು ಹಿಂಗು ಗುಂಡಿ ತೋಡುವ ಮಷಿನ್‍ನನ್ನು ಮಂಜುನಾಥ್, ಜ್ಯೋತಿಭಾ ಪವಾರ್, ವಿನಯ್‍ಕುಮಾರ್, ಪವನ್ ಅನಾವರಣಗೊಳಿಸಿದರು. ಈ ಯಂತ್ರ ವನ್ನು ಗಿಡಗಳ ಮದ್ಯ ಸುಲಭವಾಗಿ ಹೊತ್ತುಕೊಂಡು ಸಾಗಬಹುದಾಗಿದೆ. ಬಿಡಿಭಾಗಗಳನ್ನು ಬೇರ್ಪಡಿಸಿ ಸಾಗಣೆ ಮಾಡಿಕೊಂಡು ನಂತರ ತೋಟಗಳಲ್ಲಿ ಅಳವಡಿಸಿ ಕೊಳ್ಳಬಹುದಾದ ತಂತ್ರಗಾರಿಕೆ ಇದಾಗಿದೆ. 100 ಸಿಸಿ ಬೈಕ್ ಇಂಜಿನ್ ಬಳಕೆ ಮಾಡಲಾಗಿದೆ.

ರೋಗಿಗಳು ಬಳಕೆ ಮಾಡುವ ಗಾಲಿ ಕುರ್ಚಿ ಬ್ಯಾಟರಿ ಚಾಲಿತವಾಗಿ ಚಲಿಸುವಂತೆ, ಸಾಮಾನ್ಯವಾಗಿ ದೊರೆ ಯುವ ಗಾಲಿ ಕುರ್ಚಿಗೆ ಅಳವಡಿಸಿ ಕೊಳ್ಳುವ ಮೂಲಕ ಸುಮಾರು 24 ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡುವ ವಿಧಾನವನ್ನು ಪ್ರತ್ಯುಷ್, ದೀಪಕ್, ಲಿಂನ್ಸಿ, ಮಲ್ಲಿಕಾರ್ಜುನ್ ನಿರ್ಮಿಸಿದ್ದರು.ಉಳಿದಂತೆ ಅಟೋಮೆಟಿಕ್ ಗ್ಯಾಸ್ ತುಂಬಿಸುವ ವಿಧಾನ, ಅನಿಲ ಸೋರಿಕೆ ಬಗ್ಗೆ ಮುಂಜಾಗೃತಾ ಮಾಹಿತಿ, ಕ್ಯಾಶ್‍ಲೆಸ್ ಬಳಕೆಗೆ ಬಸ್ ಅಥವಾ ಪೆಟ್ರೋಲ್ ಬಂಕ್‍ಗಳಲ್ಲಿ ಕಾರ್ಡ್ ಮೂಲಕ ಹಣ ಸಂದಾಯ ಮಾಡುವ ವಿಧಾನ. ಸುಮಾರು 60 ಕ್ಕೂ ಅನ್ವೇಷಣೆಗಳು ಅನಾವರಣಗೊಂಡವು.ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ ಹಾಗೂ ನಿರ್ದೇಶಕ ಡಾ. ಎಂ.ಸಿ. ಕಾರ್ಯಪ್ಪ ಉದ್ಘಾಟಿಸಿದರು. ಈ ಸಂದರ್ಭ ಪ್ರಾಂಶುಪಾಲ ಡಾ. ಪಿ.ಸಿ. ಕವಿತಾ, ಡಾ. ರೋಹಿಣಿ ತಿಮ್ಮಯ್ಯ ಉಪಸ್ಥಿತರಿದ್ದರು.

-ಸುದ್ದಿಪುತ್ರ