ಕುಶಾಲನಗರ, ಮೇ 23: ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಫಲಿತಾಂಶ ಪಡೆದ ಬಿಜೆಪಿ ಮತ್ತೊಮ್ಮೆ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿದಿರುವದು ಒಂದೆಡೆಯಾದರೆ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಪ್ರತಾಪ್‍ಸಿಂಹ ಅವರು ಎರಡನೇ ಬಾರಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸುವದರೊಂದಿಗೆ ಸಂಭ್ರಮ ಹಂಚಿಕೊಂಡರು.

ಕಾರ್ಯಕರ್ತರು ಬಿಜೆಪಿ ಬಾವುಟಗಳನ್ನು ಹಿಡಿದು ಪಟ್ಟಣದ ಮಾರಿಯಮ್ಮ ದೇವಾಲಯದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಬ್ಯಾಂಡ್ ವಾದ್ಯಗಳೊಂದಿಗೆ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿ ಬಂದರು.

ಬ್ಯಾಂಡ್‍ಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ ಬಿಜೆಪಿ ಹಾಗೂ ಮೋದಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಜಿಪಂ ಸದಸ್ಯೆ ಮಂಜುಳಾ, ಪ್ರಮುಖರಾದ ಜಿ.ಎಲ್.ನಾಗರಾಜ್, ಜೆಮ್ಸಿ ಮೊನ್ನಪ್ಪ, ಪಿ.ಪಿ.ಸತ್ಯನಾರಾಯಣ, ಶಿವಾಜಿರಾವ್, ದೇವರಾಜ್, ಭಾಸ್ಕರ್ ನಾಯಕ್, ವೈಶಾಖ್, ನವನೀತ್ ಮತ್ತಿತರರು ಇದ್ದರು.