ಭಾಗಮಂಗಲ, ಮೇ 22: ವರ್ಷಂಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದ ತ್ರಿವೇಣಿ ಸಂಗಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಗೊಳ್ಳುತ್ತಿರುವ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದೀಗ ಮಳೆಗಾಲ ಸಮೀಪಿಸುತ್ತಿರುವಂತೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಮೇಲ್ಸೇತುವೆ ನಿರ್ಮಿಸುವ ಸಲುವಾಗಿ ಈ ಹಿಂದೆ ಇದ್ದ ರಸ್ತೆಗಳ ಬದಿಯಲ್ಲೆಲ್ಲ ಗುಂಡಿಗಳನ್ನು ತೆಗೆದು ಪಿಲ್ಲರ್‍ಗಳನ್ನು ಅಳವಡಿಸಲಾಗುತ್ತಿದ್ದು, ಜನರು, ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ನಾಪೋಕ್ಲು ರಸ್ತೆ ಕಡೆಗೆ ನಿರ್ಮಿಸಲಾಗಿದ್ದ ಕಾಂಕ್ರಿಟ್ ರಸ್ತೆಯನ್ನು ಒಡೆದು ಹಾಕಲಾಗಿದ್ದು, ಇದರಿಂದಾಗಿ ನಾಪೋಕ್ಲು ಕಡೆಗೆ ಸಂಚಾರ ದುಸ್ತರವಾಗಲಿದೆ. ಕಾಮಗಾರಿ ಸಂದರ್ಭ ಒಳಚರಂಡಿಗಳನ್ನು ಮುಚ್ಚಲಾಗಿದ್ದು, ಇದನ್ನು ತೆರವುಗೊಳಿಸದಿದ್ದಲ್ಲಿ ಚರಂಡಿ ನೀರು ರಸ್ತೆ ಮಧ್ಯೆ ಹರಿದು ಮತ್ತಷ್ಟು ಸಮಸ್ಯೆಯುಂಟಾಗುವ ಸಾಧ್ಯತೆಯಿದೆ.

ಅಲ್ಲದೆ, ಸಂಗಮದ ಬಳಿಯಿಂದ ಹರಕೆ ಮುಡಿ ಒಪ್ಪಿಸಲು ತೆರಳು ವವರಿಗೆ ದಾರಿ ಇಲ್ಲದಂತಾಗಿದ್ದು, ಬದಲೀ ವ್ಯವಸ್ಥೆ ಕಲ್ಪಿಸುವದು ಅನಿವಾರ್ಯವಾಗಿದೆ. ಮಳೆ ಆರಂಭವಾದರೆ (ಮೊದಲ ಪುಟದಿಂದ) ಭೂಕುಸಿತ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮದ ಅಗತ್ಯವಿದೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಂಬಂಧಿಸಿದವರ ಗಮನ ಸೆಳೆದಿದ್ದು, ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಪ್ರವಾಹದೊಂದಿಗೆ ಇನ್ನೊಂದಿಷ್ಟು ಸಮಸ್ಯೆ ಎದುರಾಗಲಿದೆ.

ಮಳೆಗಾಲದಲ್ಲಿ ಸ್ಥಗಿತ : ಮೇಲ್ಸೇತುವೆ ಕಾಮಗಾರಿ ಯಥಾ ಪ್ರಕಾರ ನಡೆಯುತ್ತಿದೆ. ಮಳೆಗಾಲ ಆರಂಭವಾಗುವವರೆಗೂ ಕಾಮಗಾರಿ ನಡೆಸಲಾಗುವದು. ಮಳೆಗಾಲದಲ್ಲಿ ಸ್ಥಗಿತಗೊಳಿಸಿ ಮಳೆಗಾಲ ಮುಗಿದ ಬಳಿಕ ಮತ್ತೆ ಆರಂಭಿಸಲಾಗುವದು. ಸೇತುವೆ ಕೆಳಗಡೆ ಯಾವದೇ ಸಮಸ್ಯೆ ಉದ್ಭವಿಸುವದಿಲ್ಲ. ಕೆಳಗಿನ ರಸ್ತೆಯನ್ನು ಅಗಲೀಕರಿಸಲಾಗಿದೆ. ಸಂಚಾರಕ್ಕೆ ಯಾವದೇ ಸಮಸ್ಯೆ ಉಂಟಾಗುವದಿಲ್ಲ. ಸಮಸ್ಯೆಯಾಗದಂತೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ ಎಂದು ಕಾಮಗಾರಿಯ ಪ್ರಾಜೆಕ್ಟ್ ಮ್ಯಾನೇಜರ್ ಮಹೀಂದ್ರ ಬಾಬು ತಿಳಿಸಿದ್ದಾರೆ. - ಕೆ.ಡಿ. ಸುನಿಲ್