ಸಿದ್ದಾಪುರ, ಮೇ 22: ಸಿದ್ದಾಪುರದಲ್ಲಿ ವಿವಿಧ ಸಂಘಟನೆಯ ವತಿಯಿಂದ ಕಸದ ಸಮಸ್ಯೆಗೆ ಮುಕ್ತಿ ಕಾಣಲು ಅರಿವು ಕಾರ್ಯಕ್ರಮ ಹಾಗೂ ಸೈಕಲ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಸಿದ್ದಾಪುರ ಲಯನ್ಸ್ ಕ್ಲಬ್, ಕೊಡವ ಕಲ್ಚರಲ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ವೀರಾಜಪೇಟೆ ಹಾಗೂ ಮೂರ್ನಾಡು ಮತ್ತು ಕ್ಲೀನ್ ಕೂರ್ಗ್ ಸಂಘಟನೆಯ ವತಿಯಿಂದ ಸಿದ್ದಾಪುರದ ಲಯನ್ಸ್ ಸಭಾಂಗಣದಲ್ಲಿ ಕಸವನ್ನು ತಡೆಯುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಲೀನ್ ಕೂರ್ಗ್ ಸಂಘಟನೆಯ ಸದಸ್ಯ ಬಡುವಂಡ ಅರುಣ್ ಅಪ್ಪಚ್ಚು, ಕೊಡಗು ಜಿಲ್ಲೆಯಷ್ಟು ಸುಂದರ ಪ್ರದೇಶ ಮತ್ತೊಂದಿಲ್ಲ. ನಮ್ಮ ಜಿಲ್ಲೆಯನ್ನು ಶುಚಿಯಾಗಿಟ್ಟು, ಪರಿಸರವನ್ನು ಕಾಪಾಡಬೇಕು ಎಂದರು. ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಹಾಕಬಾರದು. ನಮ್ಮ ಕಸ ನಮ್ಮ ಹೊಣೆ ಎಂಬ ಧ್ಯೇಯವಾಕ್ಯದೊಂದಿಗೆ ಕಸಕ್ಕೆ ಮುಕ್ತ ಕಾಣಿಸಬೇಕೆಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷ ಮಣಿ ಮಾತನಾಡಿ, ಸಿದ್ದಾಪುರ ಗ್ರಾ.ಪಂ ಕಸ ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆ ಇದ್ದು, ದಾನಿಗಳು ಜಾಗ ನೀಡಿದ್ದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾಪುರದ ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷೆ ಅಜಿನಿಕಂಡ ವೀಣಾ ಕುಂಞ್ಞಪ್ಪ ಮಾತನಾಡಿ, ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಸಿಗುತ್ತದೆ. ಯುವ ಪೀಳಿಗೆ ಪ್ಲಾಸ್ಟಿಕ್ ವಸ್ತುಗಳಿಂದ ದೂರ ಇರಬೇಕೆಂದು ಕರೆ ನೀಡಿದರು.
ನೆಲ್ಯಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮಾತನಾಡಿ, ಕೆಲವರು ಬೆಳಗ್ಗಿನ ಜಾವ ವಾಯು ವಿಹಾರಕ್ಕೆ ತೆರಳುವ ಸಂದರ್ಭ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ ಎಂದರು.
ಪಾಲಿಬೆಟ್ಟ ಚೆಶೈರ್ ಹೋಂ ನ ಪುನಿತಾ ರಾಮಸ್ವಾಮಿ ಮಾತನಾಡಿ, ಕೊಳೆಯುವ ಕಸ ಹಾಗೂ ಪ್ಲಾಸ್ಟಿಕ್‍ಗಳನ್ನು ಬೇರ್ಪಡಿಸಬೇಕು. ವಿಂಗಡನೆ ಮಾಡಿದ ಕಸವನ್ನು ಶುಚಿತ್ವಗೊಳಿಸಿದರೆ ಚೆಶೈರ್ ಹೋಂ ಪಡೆಯುತ್ತದೆ ಎಂದು ಮಾಹಿತಿ ನೀಡಿದರು.
ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ. ವಿಶ್ವನಾಥ್ ಮಾತನಾಡಿ, ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಅಂಗಡಿ ಹಾಗೂ ಮನೆಗಳ ಕಸಗಳೇ ಹೆಚ್ಚಾಗಿದ್ದು, ಇದರಿಂದಾಗಿ ಸಮಸ್ಯೆ ತೀವ್ರವಾಗಿದೆ. ಕಸವಿಲೇವಾರಿಗೆ ಸೂಕ್ತ ಜಾಗದ ಕೊರತೆ ಇದ್ದು, ಗ್ರಾ.ಪಂ. ಜಾಗಕ್ಕಾಗಿ ಶ್ರಮಪಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೀತಿಯಂಡ ವಿವೇಕ್ ಜೋಯಪ್ಪ, ಸಿದ್ದಾಪುರ ಪಟ್ಟಣ ಸೇರಿದಂತೆ ರಸ್ತೆ ಬದಿಯಲ್ಲಿ ದಿನನಿತ್ಯ ಎತ್ತನೋಡಿದರೂ ಕಸದ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಭೆ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್‍ನ ದೇವಣಿರ ಸುಜಯ್, ಲಯನ್ಸ್ ಸಿದ್ದಾಪುರ ಅಧ್ಯಕ್ಷ ಪಟ್ಟಡ ವಿಶಾಲ್ ದೇವಯ್ಯ, ವೀರಾಜಪೇಟೆಯ ಜಯರಾಂ ಆಚಾರ್, ನೆಲ್ಯಹುದಿಕೇರಿ ಗ್ರಾ.ಪಂ. ಸದಸ್ಯರು, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು. ವಿವೇಕ್ ಜೋಯಪ್ಪ ಸ್ವಾಗತಿಸಿ, ಪುನಿತಾ ರಾಮಸ್ವಾಮಿ ವಂದಿಸಿದರು.
- ಚಿತ್ರ ವರದಿ: ಎ.ಎನ್ ವಾಸು