ಮಡಿಕೇರಿ, ಮೇ 22: ತಮ್ಮ ಆಡಳಿತಾವಧಿಯಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದ ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಅವರ ಆದರ್ಶ ಚಿಂತನೆಗಳನ್ನು ಇಂದಿನ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಕರೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 28ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ಅವರು ಯುವಕರಾಗಿದ್ದಾಗಲೇ ದೇಶದ ಮಹಾನ್ ಶಕ್ತಿಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಯುವ ಸಮೂಹಕ್ಕೆ ಮತದಾನದ ಹಕ್ಕನ್ನು ತಂದುಕೊಟ್ಟ ದೂರದೃಷ್ಟಿತ್ವದ ನಾಯಕತ್ವ ಹೊಂದಿದ್ದ ಅವರು ದೇಶದಲ್ಲಿ ಕಂಪ್ಯೂಟರ್, ದೂರಸಂಪರ್ಕ, ಉನ್ನತ ಶಿಕ್ಷಣ ವ್ಯವಸ್ಥೆ ಸೇರಿದಂತೆ ಪ್ರತಿಗ್ರಾಮಮಟ್ಟದಲ್ಲಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಮಂಜುನಾಥ್ ಕುಮಾರ್ ಬಣ್ಣಿಸಿದರು.

ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಆಡಳಿತ ನೀಡಿದ ಕೊಡುಗೆ ಅಪಾರವಾಗಿದೆ. ಮತ್ತೊಬ್ಬ ಸದಸ್ಯ ಎಂ.ಎ.ಉಸ್ಮಾನ್ ಮಾತನಾಡಿ, ದಿ.ರಾಜೀವ್ ಗಾಂಧಿ ಅವರ ಆಡಳಿತ ವೈಖರಿಯ ಬಗ್ಗೆ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ವಕ್ತಾರ ಟಿ.ಈ. ಸುರೇಶ್, ಜಿ.ಪಂ ಸದಸ್ಯೆ ಕುಮುದಾ ಧರ್ಮಪ್ಪ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ. ಯು. ಅಬ್ದುಲ್ ರಜಾಕ್, ಮೂಡಾ ಮಾಜಿ ಅಧ್ಯಕ್ಷ ಚುಮ್ಮಿದೇವಯ್ಯ, ಮುದ್ದಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಪಾರ್ವತಿ ಫ್ಯಾನ್ಸಿ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಕಚೇರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ದಿ.ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.