ಒಡೆಯನಪುರ, ಮೇ 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 24 ಜನಪ್ರಿಯ ಕಾರ್ಯಕ್ರಮ ಗಳಲ್ಲಿ ಸಿರಿ ಗ್ರಾಮಾಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ಸಮಿಪದ ಶನಿವಾರಸಂತೆ ಕಾನ್ವೆಂಟ್ ರಸ್ತೆಯ ಮಳಿಗೆಯಲ್ಲಿ ಮುಂದಿನ ಹತ್ತು ದಿನಗಳವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿರಿ ಹಬ್ಬದ ಪ್ರಯುಕ್ತವಾಗಿ ಸಿರಿ ಸಿದ್ಧ ಉಡುಪುಗಳ ಮಾರಾಟ ಮತ್ತು ಸಿರಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸಿರಿ ಉತ್ಪನ್ನ ಮಾರಾಟ ಮತ್ತು ಸಿರಿ ಸಿದ್ಧ ಉಡುಪುಗಳ ಮಾರಾಟ ವ್ಯವಹಾರಕ್ಕೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ, ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಘದ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು ಹಾಗೂ ಸಂಸ್ಥೆಯ ಸದಸ್ಯರು ಸಿರಿ ಉತ್ಪನ್ನ ಮತ್ತು ಸಿದ್ದ ಉಡುಪುಗಳ ಮಾರಾಟ ವ್ಯವಹಾರ ನಡೆಸುತ್ತಿದ್ದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಂಡ ನಂತರ ಗ್ರಾಮೀಣ ಪ್ರದೇಶಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ, ಮಹಿಳೆಯರ ಸ್ವಾವಲಂಬನೆ ಜೀವನಕ್ಕೂ ಆಧಾರವಾಗಿದೆ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಿರಿ ಉತ್ಪನ್ನ ತಯಾರಿಕೆ ಮತ್ತು ಮಾರಾಟ ವ್ಯವಹಾರದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವದರ ಜೊತೆಯಲ್ಲಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಸಿರಿ ಉತ್ಪನ್ನ ಮಳಿಗೆ ಪ್ರಬಂಧಕ ಸಂದೀಪ್ ಪ್ರಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ವ್ಯವಹಾರ ವಹಿವಾಟನ್ನು ಹೆಚ್ಚಿಸುವ ಉದ್ದೇಶವಾಗದೆ ಉತ್ಪನ್ನಗಳ ತಯಾರಿಕೆ ಮಾಡಿ ಅವುಗಳನ್ನು ಮಾರಾಟ ಮಾಡುವ ಮೂಲಕ ಸಿರಿ ಗ್ರಾಮಾಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಎಂದರು. ಸಿರಿ ಗ್ರಾಮಾಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಸಿರಿ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ, ಇದೀಗ ಸಿರಿ ಸಿದ್ಧ ಉಡುಪುಗಳ ಮಾರಾಟ ಮಳಿಗೆಯನ್ನು ಸ್ಥಾಪಿಸಿ ವ್ಯಾಪಾರ ವ್ಯವಹಾರ ನಡೆಸಲು ಪ್ರೋತ್ಸಾಹಿಸುತ್ತಿದೆ ಇದರ ಜೊತೆಯಲ್ಲಿ ಸ್ವದೇಶಿ ಸಿರಿ ಉತ್ಪನ್ನ ಮತ್ತು ಸ್ವದೇಶಿ ಖಾದಿ ಸಿದ್ಧ ಉಡುಪುಗಳನ್ನು ಮಾರಾಟ ಮಾಡಲು ಪ್ರೋತ್ಸಾಹಿಸುತ್ತಿದೆ ಈ ನಿಟ್ಟಿನಲ್ಲಿ ಸಿರಿ ಉತ್ಪನ್ನ ಮತ್ತು ಸಿರಿ ಸಿದ್ಧ ಉಡುಪುಗಳ ಮಾರಾಟ ಮತ್ತು ಪ್ರದರ್ಶನ ಮೇಳಗಳನ್ನು ನಡೆಸಲಾಗುತ್ತಿದೆ ಎಂದರು.

ಕೊಡ್ಲಿಪೇಟೆ ಜನ ಜಾಗೃತಿ ವೇದಿಕೆ ಅಧ್ಯಕ್ಷ ಭಗವಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸರಕಾರ ಮಾಡಲಾಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿರುವದು ಶ್ಲಾಘನಿಯ ಎಂದರು. ಸಿರಿ ಉತ್ಪನ್ನಗಳು ಹಾಗೂ ಸಿರಿ ಸಿದ್ಧ ಉಡುಪುಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು ಇತರ ವ್ಯಾಪಾರ ಉದ್ದಿಮಿಯಲ್ಲಿರುವಂತೆ ಯಾವದೆ ಕಮಿಷನ್ ವ್ಯವಹಾರ ಇಲ್ಲದೆ ನೇರವಾಗಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಉತ್ಪನ್ನಗಳ ಮಾರಾಟ ಮಳಿಗೆಯನ್ನು ಮಳಿಗೆ ಮಾಲೀಕ ಲಿಂಗರಾಜು ಉದ್ಘಾಟಿಸಿ ಮಾತನಾಡಿದರು. ಶನಿವಾರಸಂತೆ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ ಹರೀಶ್, ಶನಿವಾರಸಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎನ್. ರಘು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿರಿ ಉತ್ಪನ್ನ ಪ್ರಬಂಧಕರಾದ ಅಜಿತ್, ನಿತಿನ್, ಸಿರಿ ಧಾನ್ಯ ಮೇಲ್ವಿಚಾರಕ ಸುರೇಶ್, ಕೊಡ್ಲಿಪೇಟೆ ವಲಯದ ನಿಕಟ ಪೂರ್ವ ಮೇಲ್ವಿಚಾರಕ ಸುಬ್ರಮಣಿ, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿಗಳಾದ ಎಸ್.ಆರ್. ಶೋಭಾವತಿ, ಪವನ್ ಮುಂತಾದವರು ಹಾಜರಿದ್ದರು.

- ವಿ.ಸಿ. ಸುರೇಶ್ ಒಡೆಯನಪುರ