ಮಡಿಕೇರಿ, ಮೇ 20: ಕೇಂದ್ರ ಸರಕಾರದಿಂದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಬಿಡುಗಡೆಗೊಂಡಿರುವ ರೂ. 44 ಲಕ್ಷ ವೆಚ್ಚದ ಹಣದಲ್ಲಿ ಇಲ್ಲಿನ ಸ್ಟುವರ್ಟ್ ಹಿಲ್ ಕಸ ಸಂಗ್ರಹಾಗಾರದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಮಡಿಕೇರಿಯ ನಿವಾಸಿಗಳಿಂದ ನಿತ್ಯ ಸಂಗ್ರಹಿಸುವ ಕಸವನ್ನು ಸ್ಟುವರ್ಟ್ ಹಿಲ್ ಬೆಟ್ಟ ಶ್ರೇಣಿಯಲ್ಲಿ ಸುರಿಯಲಾಗುತ್ತಿದೆ.
ಇಲ್ಲಿ ಭಾರೀ ದುರ್ನಾತದೊಂದಿಗೆ ನೊಣ ಇತ್ಯಾದಿ ಉಪಟಳ ಬಗ್ಗೆ ಜನವಲಯದಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಾಗಿ ಕಸ ಚದುರದಂತೆ ಸೂಕ್ತ ರೀತಿ ನಿರ್ವಹಿಸುವ ದಿಸೆಯಲ್ಲಿ ಕೇಂದ್ರ ಸರಕಾರದ ವಿಶೇಷ ನಿಧಿಯಿಂದ ಆ ಪ್ರದೇಶದಲ್ಲಿ ತಡೆಗೋಡೆಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಸ ನಿರ್ವಹಣೆ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವದು ಎಂದು ಅವರು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.