ಸೋಮವಾರಪೇಟೆ, ಮೇ 19: ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಪಟ್ಟಣದ ಜೈಜವಾನ್ ಮಾಜೀ ಸೈನಿಕರ ಸಂಘದ ಕಚೇರಿಯಲ್ಲಿ ಧರ್ಮ ಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜನಜಾಗೃತಿ ಸನಾತನ ಸಂಸ್ಥೆಯ 75ನೇ ಸಂತರಾದ ರಮಾನಂದ ಗೌಡ ಅವರು, ಪ್ರತಿಯೋರ್ವರಿಗೂ ಧಾರ್ಮಿಕ ಶಿಕ್ಷಣದ ಅಗತ್ಯವಿದೆ. ಹಿಂದೂ ಧರ್ಮ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ಸನಾತನ ಧರ್ಮವಾಗಿದೆ. ಇದರ ಅಚರಣೆಯಿಂದ ಭಗವಂತನ ಸಾನ್ನಿಧ್ಯ ಲಭಿಸುತ್ತದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಮೈಸೂರು ವಿಭಾಗದ ಸಂಚಾಲಕ ಶಿವರಾಂ ಅವರು ಮಾತನಾಡಿ, ತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಹಿಂದೂ ಧರ್ಮವನ್ನು ವಿಭಜಿಸುವ ಕೆಲಸವನ್ನು ಕೆಲವರು ಮುಂದುವರೆಸಿಕೊಂಡು ಬಂದಿದ್ದು, ಈ ಬಗ್ಗೆ ಇಡೀ ಸಮಾಜ ಜಾಗೃತಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರುಗಳಾದ ಮಂಜುಳಾ ಗೌಡ, ರೂಪ ಗೌಡ, ಅಭಿಷೇಕ್ ಪೈ, ಲಕ್ಷ್ಮಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.