ಚೆಟ್ಟಳ್ಳಿ, ಮೇ 19: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನಿಸರ್ಗಧಾಮ ಟೂರಿಸ್ಟ್ ಸೆಂಟರಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಸಹೋದರತೆಯ ಸಂದೇಶವನ್ನು ಸಾರಿದ್ದಾರೆ. ನಿಸರ್ಗಧಾಮ ಟೂರಿಸ್ಟ್ ಸೆಂಟರಿನಲ್ಲಿ ಸುಮಾರು 100 ಮಳಿಗೆಗಳಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎನ್.ಟಿ.ಸಿ.ಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸರ್ವ ಧರ್ಮದವರಿದ್ದಾರೆ. ಅದರಂತೆ ಪ್ರತೀ ವರ್ಷವೂ ರಂಜಾನ್, ಗಣೇಶ ಚತುರ್ಥಿ, ಕ್ರಿಸ್‍ಮಸ್ ಹಾಗೂ ಮುಂತಾದ ಹಬ್ಬಗಳನ್ನು ಆಚರಿಸುವದು ಇಲ್ಲಿಯ ವಿಶೇಷ.

ಇಫ್ತಾರ್ ಕೂಟದಲ್ಲಿ ಅನ್ಯ ಧರ್ಮದವರು ಮುಸ್ಲಿಂ ಸಹೋದರರೊಡನೆ ಇಫ್ತಾರ್ ಕೂಡದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಸಂದರ್ಭ ಮಾತನಾಡಿದ ಕುಶಾಲನಗರದ ಉದ್ಯಮಿ ರವೀಂದ್ರ ರೈ, ಸರ್ವರಿಗೂ ಇಫ್ತಾರ್ ಕೂಟವನ್ನು ಏರ್ಪಡಿಸಿ, ದೇವನೊಬ್ಬ ನಾಮ ಹಲವು ಎಂಬದಕ್ಕೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಸಾಕ್ಷಿಯಾಗಿದೆ. ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ರೀತಿಯ ಕಾರ್ಯಕ್ರಮಗಳು ನಮ್ಮಗಳ ನಡುವೆ ಬಾಂಧವ್ಯ ಬೆಸುಗೆಯನ್ನು ವೃದ್ಧಿಸುತ್ತದೆ ಎಂದ ಅವರು ಎನ್.ಟಿ.ಸಿ.ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾಂಗ್ರೆಸ್ ಯುವ ಮುಖಂಡ ಮೈಸಿ ಮಾತನಾಡಿ, ನಿಸರ್ಗಧಾಮ ಟೂರಿಸ್ಟ್ ಸೆಂಟರಿನಲ್ಲಿ ಸರ್ವ ಧರ್ಮದವರಿಗೂ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಆಯೋಜಿಸಿದ ಎನ್.ಟಿ.ಸಿ. ಮಾಲೀಕರಾದ ಅಬ್ದುಲ್ ಸಲಾಂ ರಾವತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಆಟೋ ಚಾಲಕರಾದ ಜಯಂತ್ ಮಾತನಾಡಿ, ಎನ್.ಟಿ.ಸಿ.ಯು ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿಯುವದಕ್ಕೆ ಇಂತಹ ಕಾರ್ಯಕ್ರಮಗಳು ಅನುಕೂಲವಾಗಲಿದೆ. ಅಣ್ಣ-ತಮ್ಮಂದಿರಂತೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡೆವು ಎಂದರು.

ಶಾಂತಿ, ಸಹೋದರತೆಯನ್ನು ಸಾರುವ ಉದ್ದೇಶದಿಂದ ಎನ್.ಟಿ.ಸಿ. ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಊರಿನ ಎಲ್ಲಾ ಧರ್ಮದ ಪ್ರಮುಖರು ಪಾಲ್ಗೊಂಡು “ನಾವೆಲ್ಲಾ ಒಂದೇ” ಎಂಬ ಸಂದೇಶವನ್ನು ಸಾರಿದ್ದಾರೆ.