ಶನಿವಾರಸಂತೆ, ಮೇ 19: ಕೊಡ್ಲಿಪೇಟೆಯ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಡಳಿತ ಮಂಡಳಿಯ ವತಿಯಿಂದ ಸಂಘದ ಕಚೇರಿಯಲ್ಲಿ ನೂತನವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಚುನಾವಣೆಯಲ್ಲಿ ಗೆಲವು ಸಾಧಿಸಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಬಿ.ಕೆ. ಚಿಣ್ಣಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಬಿ.ಕೆ. ಚಿಣ್ಣಪ್ಪ ಅವರು ಮಾತನಾಡಿ, ಚುನಾವಣೆಗಳು ಸಂವಿಧಾನ ಬದ್ಧವಾಗಿ ನಡೆಯಬೇಕಾಗಿದ್ದರೂ ಸಹ ಜನಪ್ರತಿನಿಧಿಗಳು ಮತದಾರರಿಗೆ ಹಣದ ಆಮಿಷವೊಡ್ಡಿ ಗೊಂದಲ ಉಂಟು ಮಾಡುತ್ತಿರುವದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹೆಚ್.ಸಿ. ಯತೀಶ್ ಮಾತನಾಡಿ, ಕೊಡ್ಲಿಪೇಟೆ ಗ್ರಾಮವು ಗಡಿಭಾಗದಲ್ಲಿದ್ದು, ಸುಮಾರು 58 ಹಳ್ಳಿಗಳಿಂದ ಕೂಡಿದೆ. ರೈತರಿಗೆ, ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಕೊಡ್ಲಿಪೇಟೆಯಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕಿನ ನೂತನ ಶಾಖೆಯನ್ನು ಪ್ರಾರಂಭ ಮಾಡಬೇಕೆಂದು ಮನವಿ ಪತ್ರ ಅರ್ಪಿಸಿದರು.

ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಜಿ.ಆರ್. ಸುಬ್ರಮಣ್ಯ, ಜಿಲ್ಲಾ ವಾಣಿಜ್ಯ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿದರು. ಸಭೆಯಲ್ಲಿ ನಿರ್ದೇಶಕರುಗಳಾದ ಎಂ.ಎ. ಮೊಹಮ್ಮದ್ ಉಸ್ಮಾನ್, ಬಿ.ಕೆ. ಯತೀಶ್, ಪ್ರಸನ್ನ, ಪ್ರಮುಖರಾದ ಕೆ.ಎ. ಕೊಟ್ಟುರಪ್ಪ, ರವಿ, ಮುರುಗೇಂದ್ರಯ್ಯ, ಬಾಬುಜಾನ್ ಸಾಹೇಬ್, ರೇಣುಕ ಹಾಗೂ ಇತರರು ಉಪಸ್ಥಿತರಿದ್ದರು. ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಪ್ರವೀಣ್ ಸ್ವಾಗತಿಸಿ, ಸಹ ಕಾರ್ಯದರ್ಶಿ ವಿಜಯಕುಮಾರ್ ವಂದಿಸಿದರು.