ಸುಂಟಿಕೊಪ್ಪ, ಮೇ 19: ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ಆಶ್ರಯದಲ್ಲಿ ದಿ. ಡಿ. ಶಿವಪ್ಪ ಜ್ಞಾಪಕಾರ್ಥವಾಗಿ ಸತತ 24 ವರ್ಷಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ ಗೋಲ್ಡ್‍ಕಪ್ ಮುಕ್ತ ಫುಟ್ಬಾಲ್ ಪಂದ್ಯಾಟವು ತಾ.24 ರಿಂದ ಜೂನ್ 2 ರವರೆಗೆ ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ.

ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ರಾಜ್ಯ ಹಾಗೂ ಅಂತರ್ ರಾಜ್ಯದ ತಂಡಗಳು ಈ ಮೈದಾನದಲ್ಲಿ ಆಟವಾಡಿ ಕ್ರೀಡಾ ಪ್ರತಿಭೆಯನ್ನು ಮೆರೆದ ಕೀರ್ತಿಯು ಸುಂಟಿಕೊಪ್ಪದ ಬ್ಲೂಬಾಯ್ಸ್ ಆಶ್ರಯದಲ್ಲಿ ಡಿ. ಶಿವಪ್ಪ ಜ್ಞಾಪಕಾರ್ಥ ಆಯೋಜಿತ ಪಂದ್ಯಾಟಕ್ಕೆ ಸಲ್ಲಬೇಕಾಗುತ್ತದೆ.

ಬೆಟ್ಟಗೇರಿ ತೋಟದ ಕಾಫಿ ಬೆಳೆಗಾರರೂ ಕ್ರೀಡಾಭಿಮಾನಿಗಳಾದ ಡಿ.ವಿನೋದ್ ಶಿವಪ್ಪ ಅವರು ತಮ್ಮ ತಂದೆ ಡಿ.ಶಿವಪ್ಪ ಜ್ಞಾಪಕಾರ್ಥವಾಗಿ ಪಂದ್ಯಾಟವನ್ನು ಆಯೋಜಿಸಿ ಕೊಂಡು ಬರುತ್ತಿದ್ದು, ಕೊಡಗಿನ ಕೋಲ್ಕತ ಫುಟ್ಬಾಲ್‍ನ ಕಾಶಿ ಎಂದೇ ಪ್ರಖ್ಯಾತವಾದ ಸುಂಟಿಕೊಪ್ಪದ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಸದೌತಣ ನೀಡಲಿದೆ.

ಸುಂಟಿಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 10 ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದು, ಬ್ಲೂಬಾಯ್ಸ್ ಯುವಕ ಸಂಘದ ಸದಸ್ಯರು ರಾಜ್ಯ ಹಾಗೂ ಅಂತರ್‍ರಾಜ್ಯ ಮಟ್ಟದಲ್ಲಿ ಕಾಲ್ಚೆಂಡು ತಂಡದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಕ್ರೀಡಾಕೂಟದಲ್ಲಿ ಹಿರಿಯ ಫುಟ್ಬಾಲ್ ಆಟಗಾರ ಬಿ.ಸಿ. ಉಮೇಶ್ ದಿ|| ಎಸ್.ಯು. ಶಮೀರ್ ಸೇರಿದಂತೆ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇಬ್ರಾಹಿಂ, ಅಬೂಬಕರ್, ಉಮ್ಮರ್, ಮಹೇಂದ್ರ ಮೊದಲಾದವರು ಕ್ರೀಡಾ ಪ್ರತಿಭೆಯಿಂದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡರೆ ಮತ್ತು ಕ್ರೀಡಾ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾ. 24 ರಿಂದ ಜೂನ್ 2 ರವರೆಗೆ ರಾಜ್ಯಮಟ್ಟದ ವಿವಿಧ ತಂಡದವರು ಫುಟ್ಬಾಲ್ ಪ್ರೇಮಿಗಳ ಮನ ತಣಿಸಲಿದ್ದಾರೆ.