ಮಡಿಕೇರಿ, ಮೇ 20: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡುವಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆದ ನಾಲ್ಕನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕೊಂಪುಳಿರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಬಾರಿಯ ಚಾಂಪಿಯನ್ ಕಟ್ಟೆಮನೆ ತಂಡ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ.ಭಾನುವಾರ ನಡೆದ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯಾಟದಲ್ಲಿ ಕೊಂಪುಳಿರ ತಂಡ ಬಲಿಷ್ಠ ಕಟ್ಟೆಮನೆ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಪಂದ್ಯಾವಳಿಯ ಮೊದಲಾರ್ಥದಲ್ಲಿ ಮುನ್ನಡೆ ಆಟಗಾದ ಕಟ್ಟೆಮನೆ ಪ್ರೀತಂ ಬಾರಿಸಿದ ಉತ್ತಮ ಗೋಲಿನಿಂದ ಕಟ್ಟೆಮನೆ ಮುನ್ನಡೆ ಸಾಧಿಸಿತ್ತು. ಮೊದಲಾರ್ಧ (ಮೊದಲ ಪುಟದಿಂದ) ಮುಗಿಯುವ ವೇಳೆಗೆ ಕಟ್ಟೆಮನೆ ತಂಡದ ಡಿಫೆಂಡರ್ ಕಟ್ಟೆಮನೆ ರೋಶನ್ ಅವರ ಎಡವಟ್ಟಿನಿಂದಾಗಿ ತಮ್ಮ ತಂಡಕ್ಕೆ ಗೋಲು ಬಾರಿಸಿದ್ದರಿಂದ ಪಂದ್ಯಾವಳಿ 1-1 ರಲ್ಲಿ ಸಮನಾಯಿತು. ದ್ವಿತೀಯಾರ್ಧದಲ್ಲಿ ಕೊಂಪುಳಿ ಕಿರಣ್ ಹಾಗೂ ಜಗ ಗೋಲು ಬಾರಿಸಿ ಅಂತರವನ್ನು 3-1 ಕ್ಕೆ ಕೊಂಡೊಯ್ದರು. ಈ ಸಂದರ್ಭ ಕಟ್ಟೆಮನೆ ಪ್ರೀತಂ ಮತ್ತೊಂದು ಗೋಲು ಬಾರಿಸಿ ಅಂತರವನ್ನು 3-2 ಕ್ಕೆ ಇಳಿಸಿದರು. ಪೂರ್ಣಾವಧಿ ಮುಕ್ತಾಯಕ್ಕೆ 3-2 ಗೋಲುಗಳಿಂದ ಕೊಂಪುಳಿ ತಂಡ ವಿಜಯಶಾಲಿ ಯಾಯಿತು. ಕೊಂಪುಳಿ ತಂಡಕ್ಕೆ ಸಾಕಷ್ಟು ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತಾದರೂ ಗೋಲಾಗಿ ಪರಿವರ್ತನೆಯಾಗಲಿಲ್ಲ. ಕಟ್ಟೆಮನೆ ತಂಡದ ಗೋಲ್ ಕೀಪರ್ ಜೀವನ್ ಗಾಯಗೊಂಡು ಹೊರಗುಳಿದಿದ್ದರಿಂದ ಕಟ್ಟೆಮನೆ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‍ನಲ್ಲಿ ಕೊಂಪುಳಿ ತಂಡ ಪೊನ್ನಚ್ಚನ ತಂಡವನ್ನು ಸೋಲಿಸಿದರೆ, ಕಟ್ಟೆಮನೆ ತಂಡ ಪಾಣತ್ತಲೆ ತಂಡವನ್ನು ಸೋಲಿಸಿ ಫೈನಲ್‍ಗೇರಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯಾಟದಲ್ಲಿ ಪಾಣತ್ತಲೆ ತಂಡ ಪೊನ್ನಚನ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡರೆ ಪೊನ್ನಚನ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಪ್ರಶಸ್ತಿಗಳು
ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಕೊಂಪುಳಿರ ಕೀರ್ತಿ ಪಡೆದುಕೊಂಡರೆ, ಪಂದ್ಯಾವಳಿಯಲ್ಲಿ 18 ಗೋಲು ಬಾರಿಸಿದ ಪಾಣತ್ತಲೆ ಜಗದೀಶ್ ಉತ್ತಮ ಸ್ಕೋರರ್ ಪ್ರಶಸ್ತಿ ಪಡೆದುಕೊಂಡರು. ಬೆಸ್ಟ್ ಗೇಮ್ ಚೇಂಜರ್ ಪ್ರಶಸ್ತಿಯನ್ನು ಬೊಳ್ಳೂರು ಮೋನಿಶ್, ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಪಾಣತ್ತಲೆ ವಿಕ್ರಂ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಕೊಂಪುಳಿರ ರಂಜು, ಅತಿ ಚಿಕ್ಕ ಆಟಗಾರ ಪ್ರಶಸ್ತಿಯನ್ನು ಪಾರೆರ ಕವನ್, ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಅಪ್ಪೆಯಂಡ್ರ ಧನ್ಯ ಪಡೆದುಕೊಂಡರೆ, ಉತ್ತಮ ತಂಡ ಪ್ರಶಸ್ತಿಯನ್ನು ಕಡ್ಯದ ತಂಡ ಪಡೆದುಕೊಂಡಿತು.
ಅಂತಿಮ ಪಂದ್ಯಾವಳಿಯನ್ನು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಉದ್ಘಾಟಿಸಿದರು. ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಕಾಲೇಜಿನ ಡಾ. ಶುೃತಿ ಚೇತನ್, ದೇಲಂಪಾಡಿ ಗಣೇಶ್, ಎ.ಪಿ.ಎಂ.ಸಿ. ಅಧ್ಯಕ್ಷ ಕಾಂಗೀರ ಸತೀಶ್, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಗೌಡ ವಿದ್ಯಾ ಸಂಘದ ಖಜಾಂಚಿ ಕಟ್ಟೆಮನೆ ಸೋನಾಜಿತ್, ಉದ್ಯಮಿ ಪೊನ್ನಚನ ಮಧು ಸೋಮಣ್ಣ, ಮರಗೋಡು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮಿಪತಿ, ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ, ಮಳ್ಳಂದಿರ ಪದ್ಮಾವತಿ ಇನ್ನಿತರರಿದ್ದರು.
ಬೈಕ್ ಶೋ - ಜಾದೂ
ಸಮಾರಂಭದ ಆಕರ್ಷಣೆ ಯಾಗಿ ಬೈಕ್ ಸಾಹಸ ಪ್ರದರ್ಶನ ಹಾಗೂ ಜಾದೂ ಪ್ರದರ್ಶನ ಏರ್ಪಡಿಸ ಲಾಗಿತ್ತು. ಮೈದಾನದಲ್ಲಿ ನಡೆದ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು. ಕುಶಾಲನಗರದ ಟೀಂ ಪವರ್ ಸ್ಟ್ರೋಕ್ಸ್ ತಂಡದ ಸಂಜಯ್, ಸ್ಟೀಫನ್ ಹಾಗೂ ಸಂಜಯ್ ಫೋಕ್ಸಿ ಅವರುಗಳು ವಿವಿಧ ಭಂಗಿಯ ಸಾಹಸ ಪ್ರದರ್ಶನ ತೋರಿದರು. ಮಾಯಾ ಮ್ಯಾಜಿಶನ್ ವಿಕ್ರಂ ಶೆಟ್ಟಿ ಜಾದೂ ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಯಾಲದಾಳು ಮದನ್, ಚೋಂಡಿರ ಲಿಖಿತ್ ನಿರೂಪಿಸಿದರು.