ಮಡಿಕೇರಿ, ಮೇ 19: ನಗರದ ಹೊರವಲಯದ ಕೆ. ಬಾಡಗದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ನೂತನ ಆಡಳಿತ ಭವನ ಕಟ್ಟಡದ ಕಾಮಗಾರಿ ಮುಕ್ತಾಯ ಹಂತದೊಂದಿಗೆ, ಸುಣ್ಣ ಬಣ್ಣಗಳಿಂದ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಇದೀಗ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯೊಂದಿಗಿನ ಜಿಲ್ಲಾ ಆಡಳಿತ ಭವನದ ಮಾದರಿಯಲ್ಲೇ ನೂತನ ಜಿ.ಪಂ. ಆಡಳಿತ ಕಚೇರಿ ತಲೆಯೆತ್ತುವಂತಾಗಿದೆ. ನೂತನ ಕಟ್ಟಡ ಕಾಮಗಾರಿಯು ರೂ. 26 ಕೋಟಿ ವೆಚ್ಚದಲ್ಲಿ ರೂಪುಗೊಂಡಿದೆ.

ಬೆಂಗಳೂರಿನ ಗಾದಿರಾಜ್ ಕನ್ಸ್ಟ್ರಕ್ಷನ್ಸ್ ಉದ್ದಿಮೆಯಿಂದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನೆಲ ಅಂತಸ್ತು ಸಹಿತ ಒಟ್ಟು ಮೂರು ಅಂತಸ್ತಿನ ಕಟ್ಟಡ ಇದಾಗಿದೆ. ಜಿ.ಪಂ. ಆಡಳಿತ ಕಚೇರಿಯ ನೂತನ ವ್ಯವಸ್ಥೆಯಡಿ ಈಗಾಗಲೇ ಸುಸಜ್ಜಿತ ಆಡಳಿತಾತ್ಮಕ ಯೋಜನೆಯನ್ನು ಕೈಗೊಳ್ಳಲಾಗಿದೆ. ನೆಲ ಅಂತಸ್ತು ಸೇರಿದಂತೆ ವಾಹನಗಳ ನಿಲುಗಡೆ, ರಸ್ತೆ ಸಂಪರ್ಕ, ತಡೆಗೋಡೆ, ಮಹಾದ್ವಾರ ಸಹಿತ ವಿಶಾಲ ಆವರಣದೊಂದಿಗೆ ಜಿ.ಪಂ. ಆಡಳಿತಕ್ಕೆ ಹೊಸತನ ಗಮನ ಸೆಳೆಯುವಂತಾಗಿದೆ.

ಕೆ. ಬಾಡಗ ಮಾರ್ಗ ಬದಿ 1.60 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ; ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳ ಸಭೆ ನಡೆಯಲು ಸುಸಜ್ಜಿತ ಸಭಾಂಗಣದೊಂದಿಗೆ 170 ರಿಂದ 200 ಮಂದಿ ಆಸೀನರಾಗಲು ವಿನೂತನ ವ್ಯವಸ್ಥೆ ರೂಪುಗೊಂಡಿದೆ. ಜಿ.ಪಂ. ಸಭೆಗಳನ್ನು ನಡೆಸುವ ವೇಳೆ ಹಾಗೂ ಇತರ ಸಂದರ್ಭಗಳಲ್ಲಿ ಈ ಸಭಾಂಗಣದ ಕೆಳ ಅಂತಸ್ತಿನಲ್ಲಿ ಮತ್ತೊಂದು ಮಿನಿ ಸಭಾಂಗಣದೊಂದಿಗೆ ಭೋಜನ ಇತ್ಯಾದಿಗೆ ಅನುಕೂಲತೆ ಮಾಡಲಾಗಿದೆ.

ನೂತನ ಜಿ.ಪಂ. ಕಟ್ಟಡ ಪ್ರವೇಶ ದ್ವಾರದಿಂದಲೇ ಆಧುನಿಕ ವ್ಯವಸ್ಥೆ ಕಲ್ಪಿಸಿದ್ದು, ಎರಡು ಪ್ರತ್ಯೇಕ ಲಿಫ್ಟ್ ಅಳವಡಿಸಿ ಹಿರಿಯರು ಅಥವಾ ಅಸಹಾಯಕರು ಕಚೇರಿ ವ್ಯವಹಾರಗಳಿಗೆ ಬಂದು ಹೋಗಲು ಗಮನ ವಹಿಸಲಾಗಿದೆ. ವಿದ್ಯುತ್ ಬೆಳಕು, ನೀರು, ಶೌಚಾಲಯ, ಕಚೇರಿ ದಾಖಲಾತಿಗಳ ನಿರ್ವಹಣಾ ಕೊಠಡಿ, ಭದ್ರತಾ ವ್ಯವಸ್ಥೆ ಸೇರಿದಂತೆ ಪ್ರತಿ ಹಂತದಲ್ಲಿ ನಿಗಾವಿರಿಸಲಾಗಿದೆ.

ಈ ನೂತನ ಭವನದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊದಲ್ಗೊಂಡು ಆಯ ಅಧಿಕಾರಿಗಳಿಗೆ ಪ್ರತ್ಯೇಕ ಕಚೇರಿ, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಸಹಿತ ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕೊಠಡಿ ಹಾಗೂ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ, ಸಂದರ್ಶಕರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ರೂಪಿಸಲಾಗಿದೆ. ಇನ್ನೊಂದೆಡೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರು, ಇಬ್ಬರು ಮೇಲ್ಮನೆ ಸದಸ್ಯರುಗಳಿಗೆ ಪ್ರತ್ಯೇಕ ಕೊಠಡಿಯೊಂದಿಗೆ ಸಿಬ್ಬಂದಿ ಕೊಠಡಿ, ಸಂದರ್ಶಕರಿಗೆ ಆಸನ ವ್ಯವಸ್ಥೆ ಸೇರಿದಂತೆ ಪ್ರತಿ ಹಂತದಲ್ಲಿ ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವದು ನೂತನ ಆಡಳಿತ ಭವನದಲ್ಲಿ ಗೋಚರಿಸಲಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಕಚೇರಿಯ ನೂತನ ಈ ಕಟ್ಟಡ ಮುಕ್ತಾಯದೊಂದಿಗೆ ಚುನಾವಣಾ ಸಂಹಿತೆ ಪೂರ್ಣಗೊಂಡ ಬಳಿಕ ಉದ್ಘಾಟನೆಯಾಗಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಖಚಿತಪಡಿಸಿದ್ದಾರೆ.