ಸೋಮವಾರಪೇಟೆ, ಮೇ 20: ಕಳೆದ ಅನೇಕ ದಶಕಗಳಿಂದ ಬತ್ತಿ ಬರಡಾಗಿದ್ದ ಪಟ್ಟಣದ ಆನೆಕೆರೆ ಮತ್ತು ಯಡೂರು ಕೆರೆಗಳಲ್ಲಿ ಈ ವರ್ಷದ ಬೇಸಿಗೆಯಲ್ಲೂ ನೀರು ತುಂಬಿದ್ದು, ಸ್ವತಃ ಹಣದಿಂದ ಕೆರೆಗಳ ಹೂಳು ತೆಗೆಸಿದ ಹರಪಳ್ಳಿ ರವೀಂದ್ರ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪಟ್ಟಣದ ಆನೆಕೆರೆಯಲ್ಲಿ ಕೆಲ ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ಹೂಳು ತೆಗೆಸಲಾಗಿತ್ತು. ಇದಾದ ನಂತರ ಮಳೆಗಾಲವನ್ನು ಹೊರತುಪಡಿಸಿದಂತೆ ಬೇಸಿಗೆಯಲ್ಲಿ ಹನಿ ನೀರೂ ಇಲ್ಲವಾಗುತ್ತಿತ್ತು.

ಪ್ರಸಕ್ತ ವರ್ಷದ ಮಳೆಗಾಲ ಪ್ರಾರಂಭಕ್ಕೂ ಮುನ್ನ ದಾನಿಗಳಾದ ಹರಪಳ್ಳಿ ರವೀಂದ್ರ ಸ್ವತಃ ಆನೆಕೆರೆಯ ಹೂಳು ತೆಗೆಸಿದ್ದು, ನಂತರದ ಮಳೆಗಾಲದಲ್ಲಿ ಕೆರೆ ಭರ್ತಿಯಾಗಿ ಕೋಡಿ ಹರಿದಿತ್ತು. ಹಿಂದೆಲ್ಲಾ ಆನೆಗಳು ಬಂದು ನೀರುಕುಡಿಯುತ್ತಿದ್ದ ಕೆರೆಯಲ್ಲಿ ಕಳೆದ ವರ್ಷ ಹನಿ ನೀರೂ ಇಲ್ಲವಾಗಿತ್ತು. ಜಲಮೂಲ ಬತ್ತಿ ಹೋಗಿ ಬರಡಾಗಿದ್ದ ಕೆರೆಯ ಬಗ್ಗೆ ಕಾಳಜಿ ತೋರಿದ ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಹಿಟಾಚಿ, ಜೆಸಿಬಿ ಯಂತ್ರ ಬಳಸಿ ನೂರಾರು ಲೋಡ್ ಹೂಳು ತೆಗೆಸಿದ ನಂತರ ಇದೀಗ ಬೇಸಿಗೆಯಲ್ಲೂ ನೀರು ಕಾಣುವಂತಾಗಿದೆ.

ಜನ ಜಾನುವಾರುಗಳಿಗೆ ಪ್ರಮುಖ ನೀರಿನ ಮೂಲವಾದ ಯಡೂರು ಕೆರೆ ಬತ್ತಿದ್ದರಿಂದ ಗ್ರಾಮಸ್ಥರಿಗೆ ತೊಂದರೆ ಎದುರಾಗಿತ್ತು. ಕೆರೆಯ ಹೂಳನ್ನು ತೆಗೆಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಆಡಳಿತ ವರ್ಗ ಇತ್ತ ಗಮನ ಹರಿಸಿರಲಿಲ್ಲ. ಈ ಹಿನ್ನೆಲೆ ಕೆರೆಯ ಬಗ್ಗೆ ಆಸ್ಥೆ ವಹಿಸಿದ ರವೀಂದ್ರ ಯಡೂರು ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆಸಿದ್ದರು.

ಇದೀಗ ಬಿರು ಬೇಸಿಗೆಯಲ್ಲೂ ಯಡೂರು ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು, ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಒಟ್ಟಾರೆ ಆಡಳಿತ ವರ್ಗ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿ ಅವನತಿಯ ಹಾದಿಯಲ್ಲಿದ್ದ ಆನೆಕೆರೆ ಮತ್ತು ಯಡೂರು ಕೆರೆಗಳನ್ನು ಸ್ವಂತ ಹಣದಿಂದ ಹೂಳು ತೆಗೆಸುವ ಮೂಲಕ ಜನೋಪಕಾರಿ ಕಾರ್ಯ ಮಾಡಿರುವ ರವೀಂದ್ರ ಅವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಯಡೂರು ಕೆರೆಗೆ ತಡೆಗೋಡೆಯ ಅಗತ್ಯವಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

- ವಿಜಯ್ ಹಾನಗಲ್