ಮಡಿಕೇರಿ, ಮೇ 18: ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವ ಮೋಡ ಬಿತ್ತನೆ ಯೋಜನೆಯನ್ನು ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸ ಬಾರದೆಂದು ಅಖಿಲ ಕೊಡವ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಮುಖ್ಯ ಮಂತ್ರಿಗಳು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಕಳೆದ ಬಾರಿಯ ಪ್ರಾಕೃತಿಕ ವಿಕೋಪದಿಂದಾಗಿ, ಜರ್ಜರಿತವಾಗಿರುವ ಕೊಡಗು, ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಮತ್ತೆ ಗಾಯದ ಮೇಲೆ ಬರೆ ಎಂಬಂತೆ ಮೋಡ ಬಿತ್ತನೆಯಾದರೆ ಮತ್ತೊಮ್ಮೆ ಅನಾಹುತ ಸಂಭವಿಸುವದರಲ್ಲಿ ಅನುಮಾನವೇ ಇಲ್ಲ ಎಂದು ನೆನಪಿಸಿದ್ದಾರೆ.
ವಾಡಿಕೆಯಂತೆ ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು ಜೂನ್ ತಿಂಗಳಲ್ಲಿ ನಿಧಾನವಾಗಿ ಪ್ರಾರಂಭವಾಗಿ ಜುಲೈ ಹಾಗೂ ಆಗಷ್ಟ್ ತಿಂಗಳುಗಳಲ್ಲಿ ದಾರಾಕಾರವಾಗಿ ಮಳೆಯಾಗುತ್ತದೆ. ಇದು ಪ್ರಾಕೃತಿಕವಾಗಿ ನಡೆಯುವ ಘಟನೆಯಾಗಿದ್ದು ಇದರ ವಿರುದ್ಧ ಮಾನವ ನಿರ್ಮಿತ ಮೋಡಬಿತ್ತನೆ ಮಾಡಿದರೆ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮತ್ತೆ ವಿಕೋಪ ಸಂಭವಿಸುವ ಎಲ್ಲಾ ಸಾಧ್ಯತೆ ಇದೆ. ಇದರಿಂದ ಈ ಭಾಗದ ನಾಗರಿಕರೇ ಅಲ್ಲದೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಸಂಕಷ್ಟ ಎದುರಾಗಲಿದೆ ಮತ್ತು ಈಗಾಗಲೇ ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಸೇರಿದಂತೆ ಎಲ್ಲಾ ಜೀವ ಸಂಕುಲವೂ ಅಸ್ತಿತ್ವ ಕಳೆದು ಕೊಳ್ಳುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ವಿರೋಧವನ್ನು ಲೆಕ್ಕಿಸದೆ ಸರ್ಕಾರ ಈ ಭಾಗದಲ್ಲಿ ಮೋಡಬಿತ್ತನೆ ಮಾಡಿದರೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಈ ಭಾಗದ ರೈತರು ಹಾಗೂ ಎಲ್ಲ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವದೆಂದು ಎಚ್ಚರಿಸಿದ್ದಾರೆ.
ಈ ವಿಚಾರದಲ್ಲಿ ಕೊಡಗು, ಮಲೆನಾಡು ಭಾಗದ ರೈತರು ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳು ಜಾಗೃತರಾಗಿ, ತಮ್ಮ ಅಸ್ತಿತ್ವಕ್ಕಾಗಿ, ಬಸರಕಾರಕ್ಕೆ ತಮ್ಮ ಪ್ರತಿಭಟನೆಯನ್ನು ದಾಖಲಿಸುವ ಮೂಲಕ ಸರ್ಕಾರದ ಕ್ರಮವನ್ನು ವಿರೋಧಿಸಬೇಕೆಂದು ಮಾತಂಡ ಮೊಣ್ಣಪ್ಪ ಮನವಿ ಮಾಡಿದ್ದಾರೆ.