ಮಡಿಕೇರಿ, ಮೇ 17: ಕೊಡಗು ಜಿಲ್ಲೆಯಲ್ಲಿ ಕಲ್ಪನಾತೀತವಾಗಿ 2018ರ ಮುಂಗಾರು ಮಳೆಯ ಸಂದರ್ಭ ಜಲಸ್ಫೋಟ, ಭೂಕುಸಿತ, ಮನೆ ಕುಸಿತದಂತಹ ದುರಂತ ಎದುರಾಗಿ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟದೊಂದಿಗೆ ಮಾನವ ಪ್ರಾಣ ಹಾನಿಯೂ ಘಟಿಸಿ ಹೋಗಿದೆ. ಇಂತಹ ಒಂದು ಸನ್ನಿವೇಶ ಕೊಡಗಿನಲ್ಲಿ ಸಂಭವಿಸಲಿದೆ ಎಂಬ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ದಿಢೀರನೆ ತೀವ್ರತರವಾದ ಗಾಳಿ - ಮಳೆಯೊಂದಿಗೆ ಕಳೆದ ವರ್ಷದ ಆಗಸ್ಟ್ ತಿಂಗಳು ಕೊಡಗಿನ ಜನತೆಯ ಪಾಲಿಗೆ ಕರಾಳತೆಯನ್ನು ಸೃಷ್ಟಿಸಿದೆ. ಏಕಾಏಕಿ ಉಂಟಾದ ಈ ಸನ್ನಿವೇಶ ದಿಂದಾಗಿ ಜನತೆಯೊಂದಿಗೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ತೀವ್ರತರವಾದ ಸಂಕಷ್ಟವನ್ನು ಎದುರಿಸುವಂತಾಗಿ ದ್ದಲ್ಲದೆ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸೇನಾ ಕಾರ್ಯಾ ಚರಣೆಯ ಮೂಲಕ ಪರಿಸ್ಥಿತಿ ನಿಭಾಯಿಸಲು ಪರಿತಪಿಸ ಬೇಕಾದ ಪರಿಸ್ಥಿತಿ ತಲೆದೋರಿತ್ತು.ಈ ಹಿನ್ನೆಲೆಯಲ್ಲಿ ಇನ್ನೇನು ಸದ್ಯದಲ್ಲೇ ಎದುರುಗೊಳ್ಳಲಿರುವ ಮತ್ತೊಂದು ಮಳೆಗಾಲದಲ್ಲಿ ಈ ರೀತಿಯ ಭಯಾನಕತೆಗಳು ಎದುರಾದ ಪಕ್ಷದಲ್ಲಿ ಅದನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಜನತೆಯ ರಕ್ಷಣೆಗೆ ಮುಂಜಾಗರೂಕತಾ ಕ್ರಮವನ್ನು ವಹಿಸಲಾಗುತ್ತಿದೆ. ಕೊಡಗು ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಅನುಸರಿಸುತ್ತಿದ್ದರೆ, ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟು ದುಡಿಯುವ ಪೊಲೀಸ್ ಇಲಾಖೆಯೂ ಅಗತ್ಯ ಮುನ್ನಚ್ಚರಿಕೆಯ ಬಗ್ಗೆ ಗಮನ ಹರಿಸಿದೆ.ವಿಶೇಷ ತರಬೇತಿ - ತಂಡ ರಚನೆ
ಪೊಲೀಸ್ ಇಲಾಖೆ ಈಗಾಗಲೇ ಮಡಿಕೇರಿ, ಕುಶಾಲನಗರ ಹಾಗೂ ವೀರಾಜಪೇಟೆ ಪೊಲೀಸ್ ಉಪವಿಭಾಗ ಹಾಗೂ ಡಿಎಆರ್‍ನ ಆಯ್ದ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಒಂದು ವಾರದ ವಿಶೇಷ ತರಬೇತಿಯ ಮೂಲಕ ಇವರನ್ನು ಸಜ್ಜುಗೊಳಿಸಿದೆ. ಓರ್ವ ಎಸ್‍ಐ ಹಂತದ ಅಧಿಕಾರಿಯ ಮುಂದಾಳತ್ವದಲ್ಲಿ ತಲಾ 15 ಮಂದಿಯ ನಾಲ್ಕು ತಂಡಗಳನ್ನು ಇದಕ್ಕಾಗಿ ರಚಿಸಲಾಗಿದೆ.
ಈ ಸಿಬ್ಬಂದಿಗಳಿಗೆ ಇತ್ತೀಚೆಗೆ ಎರಡು ತಂಡಗಳಾಗಿ ತಲಾ ಮೂರು ದಿನಗಳ ಚಾಕಚಕ್ಯತೆಯ ತರಬೇತಿ ಯನ್ನು ಕೊಡಿಸಲಾಗಿದೆ. ಒಂದು ದಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಅಗತ್ಯ ಮಾರ್ಗದರ್ಶನದೊಂದಿಗೆ ಮತ್ತೆರಡು ದಿನ ಇವರನ್ನು ಕಳೆದ ವರ್ಷ ದುರಂತ ಸಂಭವಿಸಿದ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಡಮ್ಮಿ ಕಾರ್ಯಾ ಚರಣೆಯ ಮೂಲಕ ಸನ್ನದ್ಧ ಗೊಳಿಸುವ ಕಾರ್ಯವನ್ನು ನಡೆಸಲಾಗಿದೆ.
ಬೆಂಗಳೂರು - ತುಮಕೂರು ರಸ್ತೆಯಲ್ಲಿರುವ ಸೃಷ್ಟಿ ಅಡ್ವೆಂಚರ್ಸ್‍ನ ಪರಿಣಿತರು, ರಿನೇ ಕನ್ಸಲ್ಟೆನ್ಸಿಯ ಪರಿಣಿತರು ಈ ಬಗ್ಗೆ ತರಬೇತಿ ನೀಡಿದ್ದಾರೆ. ಅನಾಹುತಗಳು ಸಂಭವಿಸಿದ ಸಂದರ್ಭ ‘ಫೀಲ್ಡ್’ನಲ್ಲಿ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ದುರಂತದಲ್ಲಿ ಸಿಲುಕಿ ಕೊಂಡವರನ್ನು
(ಮೊದಲ ಪುಟದಿಂದ) ರಕ್ಷಣೆ ಮಾಡಬಹುದು, ಈ ಸಂದರ್ಭದಲ್ಲಿ ಯಾವ ಯಾವ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ಅಗತ್ಯ ರಕ್ಷಣಾ ಸಾಮಗ್ರಿಗಳ ಸಹಿತವಾಗಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ‘ಶಕ್ತಿ’ಗೆ ತಿಳಿಸಿದರು. ಪೊಲೀಸ್ ಮೈದಾನದ ಮೂಲಕ ಈ ತರಬೇತಿ ಪ್ರಾರಂಭಿಸಿ ಕಳೆದ ವರ್ಷ ದುರಂತಕ್ಕೀಡಾದ ಉದಯಗಿರಿ, ಮೊಣ್ಣಂಗೇರಿಯಂತಹ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಹಗ್ಗದ (ರೋಪ್) ಮೂಲಕ ಹತ್ತುವದು, ಇಳಿಯುವದು, ಸ್ಟ್ರಕ್ಚರ್ ಬಳಕೆ ಮತ್ತಿತರ ರೀತಿಯ ಸಾಹಸದ ಕಾರ್ಯಾಚರಣೆಯ ಮೂಲಕ ಯಾವ ರೀತಿಯಲ್ಲಿ ‘ರೆಸ್ಕ್ಯೂ’ ಮಾಡಬಹುದು ಎಂಬಂತಹ ಸಿದ್ಧತೆ ನಡೆಸಲಾಗಿದೆ ಎಂದು ಎಸ್‍ಪಿ ವಿವರವಿತ್ತರು.
ಸಮಯ ನಿಗದಿ : ಇಂತಹ ಸಾಹಸಗಳನ್ನು ಎಷ್ಟು ಕನಿಷ್ಟ ಅವಧಿಯಲ್ಲಿ ಮಾಡಬಹುದು ಎಂಬ ಪರೀಕ್ಷಾತ್ಮಕವಾದ ಸಮಯ ಮಿತಿಯನ್ನೂ ತರಬೇತಿ ಸಂದರ್ಭ ಅನುಸರಿಸಲಾಗಿದೆ. ದುರಂತದ ಸಂದರ್ಭ ನಿಗದಿತ ಜಾಗದಿಂದ ಮಡಿಕೇರಿ ಯ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ಬರುವದು, ತಕ್ಷಣ ಆ ಸ್ಥಳಕ್ಕೆ ಸಿಬ್ಬಂದಿಗಳು ತ್ವರಿತವಾಗಿ ತೆರಳಿ ‘ರೆಸ್ಕ್ಯೂ’ ಆಪರೇಷನ್ ನಡೆಸುವದನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ ಎಂದು ಎಸ್‍ಪಿ ಸುಮನ್ ತಿಳಿಸಿದರು.
ಕನಿಷ್ಟ 26 ನಿಮಿಷ
ಈ ತರಬೇತಿಯ ವೇಳೆಯಲ್ಲಿ ಉದಯಗಿರಿ, ಮೊಣ್ಣಂಗೇರಿ ವಿಭಾಗದಿಂದ ಈ ರೀತಿ ಕರೆ ಮಾಡಿಸಿ ಆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸ್ಥಳದಿಂದ ಸಿಬ್ಬಂದಿಗಳು ತೆರಳಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಾಹಸವನ್ನು ತರಬೇತಿ ಪಡೆದÀ ಸಿಬ್ಬಂದಿಗಳು ಪ್ರಸ್ತುತ ಕೇವಲ 26 ನಿಮಿಷದಲ್ಲಿ ನಿಭಾಯಿಸಿ ಸಾಮಥ್ರ್ಯ ತೋರಿದ್ದಾರೆ ಎಂದು ಡಾ. ಸುಮನ್ ತೃಪ್ತಿ ವ್ಯಕ್ತಪಡಿಸಿದರು. -ಶಶಿ ಸೋಮಯ್ಯ