ಮಡಿಕೇರಿ, ಮೇ 16: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಗೌಡ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಣತ್ತಲೆ ತಂಡ ಎರಡನೇ ತಂಡವಾಗಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆದುಕೊಂಡಿದೆ. ಪೊಕ್ಕಳಂಡ್ರ ಹಾಗೂ ಬಡುವಂಡ್ರ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಪರಿಚನ ತಂಡ ಕೊಳಂಬೆ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಪರಿಚನ ಹವಿನ್ ಹಾಗೂ ವೇತನ್ ತಲಾ 1 ಗೋಲು ಬಾರಿಸಿದರೆ ಮತ್ತೊಂದು ಗೋಲನ್ನು ಕೊಳಂಬೆ ತಂಡದ ಆಟಗಾರರೇ ಹಾಕಿಕೊಂಡರು. ಕರ್ಣಯ್ಯನ ತಂಡ ಕೊಟ್ಟಕೇರಿಯನ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕರ್ಣಯ್ಯನ ಭರತ್ ಹಾಗೂ ಪ್ರತಿಕ್ ಗೋಲು ಬಾರಿಸಿದರು. ಬಳಪದ ಹಾಗೂ ತಳೂರು ತಂಡಗಳ ನಡುವಿನ ಪಂದ್ಯ ಪೂರ್ಣಾವಧಿಯಲ್ಲಿ 1-1ರಿಂದ ಸಮನಾಯಿತು. ನಂತರ ದೊರೆತ ಟೈಬ್ರೇಕರ್‍ನಲ್ಲಿ ಬಳಪದ 4-2ರಿಂದ ಗೆಲವು ಸಾಧಿಸಿತು. ಪೊಕ್ಕಳಂಡ್ರ ತಂಡ ಕುದುಕುಳಿ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿತು. ಪೊಕ್ಕುಳಂಡ್ರ ಪ್ರವೀಣ್ 2, ವಿನೋದ್ ಹಾಗೂ ಯೋಜನ್ ತಲಾ 1 ಗೋಲು ಹೊಡೆದರು.

ಪಾಣತ್ತಲೆ ಬಿ. ತಂಡ ಪರಿಚನ ತಂಡವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಪಾಣತ್ತಲೆ ಜಗದೀಶ್ 3, ವಿಕ್ರಂ 2 ಗೋಲು ಗಳಿಸಿದರು. ಬಡುವಂಡ್ರ ತಂಡ ಬಳಪದ ತಂಡವನ್ನು 6-0 ಗೋಲುಗಳಿಂದ ಸೋಲಿಸಿತು. ಸುಜಯ್ 4, ದುಶ್ಯಂತ್ ಹಾಗೂ ಭರತ್ ತಲಾ 1 ಗೋಲು ಬಾರಿಸಿದರು. ಅಯ್ಯಂಡ್ರ ತಂಡ ಸೂದನ ತಂಡವನ್ನು 1-0 ಗೋಲಿನಿಂದ ಮಣಿಸಿದರೆ, ಕೋಳಿಬೈಲು ತಂಡ ಕುಡೆಕಲ್ಲು ತಂಡವನ್ನು 1-0 ಗೋಲಿನಿಂದ ಸೋಲಿಸಿತು.

ಮತ್ತೊಂದು ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ ಚಂಡಿರ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ವಿನೋದ್ ಹಾಗೂ ಯೋಗೇಶ್ ತಲಾ 1 ಗೋಲು ಗಳಿಸಿದರೆ ಚಂಡಿರ ಸುಜಿತ್ ತಂಡದ ಪರ ಗೋಲು ಬಾರಿಸಿದರು. ಕರ್ಣಯ್ಯನ ಹಾಗೂ ಬಡುವಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಂಡ್ರ ತಂಡ ಕರ್ಣಯ್ಯನ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಸುಜಯ್ ಹಾಗೂ ಭರತ್ ಗೋಲು ದಾಖಲಿಸಿದರು.