ಮಡಿಕೇರಿ, ಮೇ 17: 2019ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಉಂಟಾದ ಬೆಳೆ ನಾಶಕ್ಕೆ ಪರಿಹಾರ ನೀಡುವ ಸಂದರ್ಭದಲ್ಲಿ ತಾರತಮ್ಯ ನೀತಿ ಅನುಸರಿಸಿ ಪರಿಹಾರಕ್ಕೆ ಯೋಗ್ಯರಲ್ಲದವರಿಗೂ ಪರಿಹಾರ ನೀಡಲಾಗಿದೆಯೆಂದು ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಆದರೆ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡ ಮಾನದಂಡಗಳಿಗೆ ಅನುಗುಣವಾಗಿ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಕಾಫಿ, ಸಂಬಾರ ಬೆಳೆ ಹಾನಿ ಹೆಕ್ಟೇರಿಗೆ ರೂ 18,000 ರಂತೆ ಗರಿಷ್ಠ 2 ಹೆಕ್ಟೇರ್ ವರೆಗೆ. ಕೃಷಿ ಭೂಮಿಯಲ್ಲಿನ ಹೂಳನ್ನು ಎತ್ತುವದು. ಹೆಕ್ಟೇರಿಗೆ ರೂ 12,000 ರಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ. ಭೂಕುಸಿತದಿಂದಾಗಿ ಜಮೀನು ನಾಶ ಹೆಕ್ಟೇರಿಗೆ ರೂ 37,500 ರಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಜಂಟಿ ಸರ್ವೇ ಕೈಗೊಂಡು ಪ್ರವಾಹ ಹಾಗೂ ಭೂಕುಸಿತದಿಂದ ಬೆಳೆ ಹಾನಿ, ಜಮೀನು ನಾಶ ಹಾಗೂ ಜಮೀನುಗಳಲ್ಲಿ ಹೂಳು ತುಂಬಿರುವ ಪ್ರಮಾಣವನ್ನು ಕಂಡುಹಿಡಿದು ದೃಢೀಕರಿಸಿರುತ್ತಾರೆ. ಈ ಜಂಟಿ ಸರ್ವೇಯ ಆದಾರದ ಮೇಲೆಯೇ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಯಾವದೇ ರೀತಿಯ ಪಕ್ಷಪಾತ, ತಾರತಮ್ಯ ಮಾಡುವ ಅವಕಾಶ ಇರುವದಿಲ್ಲ. ಪರಿಹಾರ ಧನವನ್ನು ಕಟ್ಟುನಿಟ್ಟಾಗಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯದಿಂದ ನಿಗದಿಪಡಿಸಲಾಗಿರುವ ಮಾನದಂಡಗಳಿಗೆ ಅನುಗುಣವಾಗಿಯೇ ಎಲ್ಲಾ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇದರಲ್ಲಿ ಸಣ್ಣ ಅಥವಾ ದೊಡ್ಡ ಹಿಡುವಳಿ ಹೊಂದಿರುವ ರೈತರ ನಡುವೆ ಯಾವದೇ ರೀತಿಯ ತಾರತಮ್ಯ ನೀತಿ ಅನುಸರಿಸಿರುವದಿಲ್ಲ. ಮಾನದಂಡದಲ್ಲಿನ ಗರಿಷ್ಠ ಕ್ಷೇತ್ರದ (2 ಹೆಕ್ಟೇರ್‍ವರೆಗೆ) ಹಾನಿಗೆ ಮಾತ್ರ ಪರಿಹಾರ ನೀಡಲಾಗಿದೆ.
ಈ ದಿನದವರೆಗೆ ರೂ 35 ಕೋಟಿ ಪರಿಹಾರ ಧನವನ್ನು ನೇರವಾಗಿ 34 ಸಾವಿರ ಫಲಾನುಭವಿಗಳಿಗೆ ಖಾತೆಯ ಮೂಲಕ ಜಮಾ ಮಾಡಲಾಗಿದೆ. 3 ಸಾವಿರ ಫಲಾನುಭವಿಗಳಿಗೆ ಭಾಗಶಃ ಪರಿಹಾರ ನೀಡಿದ್ದು, ಉಳಿದ ಮೊತ್ತವನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವದು. ಯಾವೊಬ್ಬ ಯೋಗ್ಯ ಫಲಾನುಭವಿಯೂ ಪರಿಹಾರದಿಂದ ವಂಚಿತರಾಗದಿರಲು ಜಿಲ್ಲಾಡಳಿತವು ಎಲ್ಲಾ ಕ್ರಮಗಳನ್ನು ಕೈಗೊಂಡಿರುತ್ತದೆ. ಪರಿಹಾರ ಲಭಿಸದೇ ಇದ್ದಲ್ಲಿ ತಾವು ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ತನ್ನ ಕಚೇರಿಯನ್ನು ಸಂಪರ್ಕಿಸಿದ್ದಲ್ಲಿ ಕೂಡಲೇ ಅಗತ್ಯ ಕ್ರಮ ವಹಿಸಲಾಗುವದು. ಸಾರ್ವಜನಿಕರು ಯಾವದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಸಂದೇಹಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಅವರ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಬೆಳೆ ಪರಿಹಾರ ಪಾವತಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಯನ್ನು ಜಿಲ್ಲಾ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.