ಗೋಣಿಕೊಪ್ಪಲು, ಮೇ 16: ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ವಿಶೇಷ ಪ್ರಯತ್ನ ನಡೆಸಿದೆ.ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅರಣ್ಯ ಸಿಬ್ಬಂದಿ ತೋಟದಲ್ಲಿ ಹುಲಿ ಚಲನವಲನದ ಬಗ್ಗೆ ಸಿಸಿ ಕ್ಯಾಮರಾ ಅಳವಡಿಸಿದ್ದು ಹುಲಿ ಸೆರೆಗೆ ಬೋನ್‍ಗಳ ವ್ಯವಸ್ಥೆ ಮಾಡಲಾಗಿದೆ.ಸಿಬ್ಬಂದಿಗಳು ತೋಟದಲ್ಲಿ ಕಾರ್ಮಿಕರ ಸಹಾಯದಿಂದ ಹುಲಿ ಹೆಜ್ಜೆ ಪತ್ತೆ ಹಚ್ಚಿದ್ದು ಬೇರೆ ಬೇರೆ ಭಾಗದಲ್ಲಿ ಹುಲಿ ಬೋನನ್ನು ಅಳವಡಿಸಿದ್ದಾರೆ. ತೋಟದ ಕಾರ್ಮಿಕರಿಗೆ ಹುಲಿ ಇರುವ ದೃಶ್ಯ ಕಂಡು ಬಂದಿದ್ದು ಈ ಹಿನ್ನಲೆಯಲ್ಲಿ ಕೆಲವು ಕಡೆಗಳಲ್ಲಿ ಇಲಾಖೆಯ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ತೋಟದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ

(ಮೊದಲ ಪುಟದಿಂದ) ನಡೆಸಿದ್ದ ಸಂದರ್ಭ ಅದೃಷ್ಟವಶಾತ್ ಪ್ರಾಣಾಪಾಯದಿಂದ ಹಸು ಪಾರಾಗಿತ್ತು. ನಂತರ ಜೀವನ್ಮರಣ ಸ್ಥಿತಿಯಲ್ಲಿದ್ದ ಹಸುವಿಗೆ ವಿಶೇಷ ಪಶು ವೈದ್ಯಾಧಿಕಾರಿಗಳಿಂದ ಸಹಾಯ ಪಡೆದು ಚಿಕಿತ್ಸೆ ಕೊಡಲಾಗಿತ್ತು. ಪ್ರತಿ ದಿನ ವೈದ್ಯರು ಭೇಟಿ ನೀಡಿ ಅಗತ್ಯ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಜೋತು ಬಿದ್ದಿದ್ದ ಮಾಂಸ ಖಂಡಗಳನ್ನು ಹೊರ ತೆಗೆಯಲಾಗಿದೆ, ಹಸು ಚೇತರಿಸಿಕೊಳ್ಳುತ್ತಿದ್ದು ಇನ್ನು ಎರಡು ವಾರದಲ್ಲಿ ಕರುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಮೆಲ್ಲಮೆಲ್ಲನೆ ಹೆಜ್ಜೆ ಇಡುತ್ತ ನಡೆದಾಡಲು ಪ್ರಯತ್ನ ಮಾಡುತ್ತಿರುವದಾಗಿ ಮಾಲೀಕರಾದ ರವಿ ಮಾಹಿತಿ ಒದಗಿಸಿದ್ದಾರೆ. ತೋಟದಲ್ಲಿ ಅಡ್ಡಾಡುತ್ತಿರುವ ಹುಲಿಯು ರಾತ್ರಿ ವೇಳೆಯಲ್ಲಿ ಮನೆಯ ಸಮೀಪವಿರುವ ಕೊಟ್ಟಿಗೆಗೆ ಲಗ್ಗೆ ಇಡಬಹುದೆಂಬ ಭಯದಲ್ಲಿ ಕೊಟ್ಟಿಗೆ ಸಮೀಪವೇ ಎಚ್ಚರಿಕೆಯಿಂದ ಕಾಯುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ತೋಟಕ್ಕೆ ಭೇಟಿ ನೀಡಿದ ರೈತ ಮುಖಂಡರು ಹುಲಿ ಸೆರೆಗೆ ಅರಣ್ಯ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಹಿರಿಯ ಅಧಿಕಾರಿಗಳಾದ ಡಿಎಫ್‍ಒ ಮರಿಯಾ ಕ್ರಿಸ್ತರಾಜ್ ಅವರನ್ನು ಸಂಪರ್ಕಿಸಿ ತೋಟದಲ್ಲಿ ನೆಲೆಸಿರುವ ಹುಲಿಯನ್ನು ಸೆರೆ ಹಿಡಿಯಲೇ ಬೇಕೆಂದು ಆಗ್ರಹಿಸಿದರು. ಈ ಸಂದರ್ಭ ರೈತ ಮುಖಂಡರಾದ ಪುಚ್ಚಿಮಾಡ ಕಿಶೋರ್, ಬಲ್ಯಮೀದೇರಿರ ಪ್ರವೀಣ್, ಹಾಗೂ ಗ್ರಾಮಸ್ಥರು ಹಾಜರಿದ್ದರು. -ಹೆಚ್.ಕೆ.ಜಗದೀಶ್