ಸಿದ್ದಾಪುರ, ಮೇ 16: ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದ್ದಾರೆ.
ಗುಹ್ಯ ಸರಕಾರಿ ಪ್ರಾಥಮಿಕ ಶಾಲೆಯ ಬಳಿಯಲ್ಲಿ 10 ಕ್ಕೂ ಅಧಿಕ ಕಾಡಾನೆಗಳಿದ್ದ ಹಿಂಡೊಂದು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪಟಾಕಿಗಳನ್ನು ಸಿಡಿಸಿ, ಕಾಡಾನೆ ಹಿಂಡನ್ನು ಓಡಿಸಲಾಯಿತು. ಶಾಲೆ ರಜೆ ಇದ್ದ ಕಾರಣ ಆಗಬಹುದಾದ ಅನಾಹುತ ತಪ್ಪಿದೆ. ಈ ಹಿಂದೆಯೂ ಕೂಡ ಗುಹ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಡಾನೆ ಹಿಂಡು ಲಗ್ಗೆಯಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾಡಾನೆಗಳ ಹಿಂಡನ್ನು ಮಾಲ್ದಾರೆ ಅರಣ್ಯ ವ್ಯಾಪ್ತಿಗೆ ಅಟ್ಟಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ದೇವಯ್ಯ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.