ಕೂಡಿಗೆ, ಮೇ 17: ತೊರೆನೂರು ಗ್ರಾಮದಲ್ಲಿರುವ ದಂಡಿಕೇಶ್ವರಿ ದೇವಿಯ ವಾರ್ಷಿಕ ಉತ್ಸವ ಚಾಲನೆಗೊಂಡಿತು. ಮೊದಲು ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರು ಪಕ್ಕದ ಕಾವೇರಿ ನದಿಗೆ ತೆರಳಿ ಗಂಗಾಪೂಜೆ ನೆರವೇರಿಸಿ ನಂತರ ಕಾವೇರಿ ನದಿಯಿಂದ ಗಂಗೆಯ ಕಳಸವನ್ನು ಮಹಿಳೆಯರು ಹೊತ್ತು ತಂದು ಅಭಿಷೇಕ ನೆರವೇರಿಸಿ, ಪೂಜೆ ಕಾರ್ಯಕ್ರಮದ ಬಳಿಕ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣಗೌಡ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್ ಬಿ ಚಂದ್ರಪ್ಪ, ಸಹಕಾರ ಸಂಘದ ನಿರ್ದೇಶಕ ಟಿ.ಕೆ. ಪಾಂಡುರಂಗ, ಗ್ರಾಮ ಪ್ರಮುಖರಾದ ಜಗದೀಶ್, ವಸಂತಕುಮಾರ್, ಶಿಕ್ಷಕ ಟಿ.ಜಿ. ಪ್ರೇಮಕುಮಾರ, ಕಾರ್ಯದರ್ಶಿ ಶೇಖರ್ ಸುಕುಮಾರ, ಶಿಕ್ಷಕ ಮಹೇಶ ಸೇರಿದಂತೆ ಸಮಿತಿಯ ಅಧ್ಯಕ್ಷ ಹನುಮಯ್ಯ ಹಾಗೂ ಪದಾಧಿಕಾರಿಗಳು ಇದ್ದರು. ಈ ಸಂದರ್ಭ ದೇವಿಯ ಉತ್ಸವದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಡೊಳ್ಳುಕುಣಿತಗಳೊಂದಿಗೆ ನಡೆಯಿತು.