ಸೋಮವಾರಪೇಟೆ,ಮೇ.15: ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಚ್.ಆರ್. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತ ರೈ ಮಾತನಾಡಿ, ಪ್ರಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರನ್ನು ಸಮಾಜವೂ ಗೌರವಿಸುತ್ತದೆ. ಸಾಧಕ ಪತ್ರಕರ್ತರನ್ನು ಗುರುತಿಸಿ ಸಂಘದ ವತಿಯಿಂದ ಗೌರವಿಸಿದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ವೃತ್ತಿಯ ಹೊರತಾಗಿಯೂ ಬಾಂಧವ್ಯ ಬೆಸೆಯಲು ಸಂಘಗಳಿಂದ ಸಾಧ್ಯ. ಸಂಘದ ಸದಸ್ಯರ ಸಹಕಾರದಿಂದ ಮಾತ್ರ ಕಾರ್ಯಕ್ರಮಗಳು ಯಶಸ್ಸು ಕಾಣುತ್ತವೆ. ಪತ್ರಕರ್ತರು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತಗೊಳ್ಳದೇ ಗ್ರಾಮೀಣ ಭಾಗಗಳ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡಲ್ಪಡುವ ವಾರ್ಷಿಕ ಪ್ರಶಸ್ತಿ ಪುರಸ್ಕøತರಾದ ತಾಲೂಕು ಸಂಘದ ಸದಸ್ಯ ಹಿರಿಕರ ರವಿ, ವಿಘ್ನೇಶ್ ಭೂತನಕಾಡು, ಸುನಿಲ್ ಪೊನ್ನೆಟ್ಟಿ, ಪ್ರೆಸ್ ಕ್ಲಬ್ ಪ್ರಶಸ್ತಿ ಪಡೆದ ವಿಶ್ವ ಕುಂಬೂರು, ತಾಲೂಕು ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ಸಂಚಾಲಕ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್, ಪ್ರಕೃತಿ ವಿಕೋಪ ಸಂದರ್ಭ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ‘ಶಕ್ತಿ’ವರದಿಗಾರ ವಿಜಯ್ ಹಾನಗಲ್ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ, ವಾರ್ಷಿಕ ಮಹಾಸಭೆಯ ವೀಕ್ಷಕ ಪಳೆಯಂಡ ಪಾರ್ಥ ಚಿಣ್ಣಪ್ಪ, ಜಿಲ್ಲಾ ಸಂಘದ ಖಜಾಂಚಿ ಅರುಣ್, ನಿರ್ದೇಶಕರುಗಳಾದ ರಾಜು ರೈ, ಚೆರಿಯಮನೆ ಸುರೇಶ್, ಕುಡೆಕಲ್ ಗಣೇಶ್, ಕುಶಾಲನಗರ ಹೋಬಳಿ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ, ಸುಂಟಿಕೊಪ್ಪ ಸಂಘದ ಅಧ್ಯಕ್ಷ ವಿನ್ಸೆಂಟ್ ಸೇರಿದಂತೆ ತಾಲೂಕು ಸಂಘದ ನಿರ್ದೇಶಕರುಗಳು, ಸದಸ್ಯರು ಉಪಸ್ಥಿತರಿದ್ದರು. ಖಜಾಂಚಿ ಬಿ.ಎ. ಭಾಸ್ಕರ್ ನಿರೂಪಿಸಿ, ಗಣೇಶ್ ಕುಡೆಕಲ್ ಪ್ರಾರ್ಥಿಸಿದರು. ಸುನಿಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿಜಯ್ ವಂದಿಸಿದರು.