ಗೋಣಿಕೊಪ್ಪ ವರದಿ, ಮೇ 15: ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಉದ್ಘಾಟನಾ ಸಮಾರಂಭದಲ್ಲಿ 350 ನೂತನ ಸದಸ್ಯರು ಸೇರ್ಪಡೆಗೊಂಡರು. ರೈತಪರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಪ್ರಮಾಣ ಮಾಡಿದರು. ಸೇರ್ಪಡೆಗೊಂಡ ಸದಸ್ಯರಿಗೆ ಹಸಿರು ಶಾಲು ಹೊದಿಸುವ ಮೂಲಕ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಪ್ರಮುಖರುಗಳು ಸಂಘಕ್ಕೆ ಬರಮಾಡಿಕೊಂಡರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಿದರು.
ಕಾರ್ಯದರ್ಶಿ ಕಳ್ಳಿಚಂಡ ಧನು ಪ್ರಾಸ್ತವಿಕವಾಗಿ ಮಾತನಾಡಿ, ದಶಕಗಳಿಂದ ಜಿಲ್ಲೆಯಲ್ಲಿ ರೈತಪರ ಹೋರಾಟಕ್ಕೆ ಬಲ ಇರಲಿಲ್ಲ. ಜಿಲ್ಲೆಯಲ್ಲಿ ರೈತ ಸಂಘದ ಸ್ಥಾಪನೆ ನಂತರ ರೈತಪರ ಹೋರಾಟಕ್ಕೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ಸರ್ಕಾರಿ ಕಚೇರಿಗಳಲ್ಲಿ ರೈತರ ಕಡತ ವಿಲೇವಾರಿ ಹಾಗೂ ಬ್ಯಾಂಕುಗಳಿಂದ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಸಂಘ ಸ್ಥಾಪನೆ ಮೂಲಕ ರೈತರಿಗೆ ನ್ಯಾಯಪರ ಹೋರಾಟಕ್ಕೆ ಬಲ ಬರಲಿದೆ ಎಂದು ಹೇಳಿದರು.
ರಾಜ್ಯ ಅಧ್ಯಕ್ಷ ಲಕ್ಷ್ಮಿನಾರಾಯಣ ಗೌಡ ಮಾತನಾಡಿ, ಕೊಡಗು ಜಿಲ್ಲೆ ದೇಶಕ್ಕೆ ರಕ್ಷಣೆ ಹಾಗೂ ಅನ್ನವನ್ನು ನೀಡುತ್ತಿದೆ. ಜಿಲ್ಲೆಯ ರೈತರಿಗೆ ನೋವಾಗುವಂತೆ ಯಾರೂ ನಡೆದುಕೊಳ್ಳಬಾರದು. ಜಿಲ್ಲೆಯಲ್ಲಿ ರೈತ ಸಂಘದ ಬಲಪ್ರದರ್ಶನ ನಡೆಯಬೇಕು ಎಂದರು.
ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ಸಂಘವನ್ನು ಬಲಿಷ್ಟಗೊಳಿಸುವ ಮೂಲಕ ಹೋರಾಟಕ್ಕೆ ರೂಪುರೇಷೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವದು. ರೈತಪರ ಚಿಂತನೆಗಳನ್ನು ಮುಂದಿಟ್ಟುಕೊಂಡು ನಡೆಸುವ ಎಲ್ಲಾ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡಲಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಮಾತನಾಡಿ, ಪ್ರಮಾಣವಚನ ಸ್ವೀಕರಿಸಿದ ರೈತರು ಸಂಘದ ಆಶಯಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನಹರಿಸಬೇಕು. ರೈತ ಸಂಘದಿಂದ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಗೊಳಿಸಿ ವಿಧಾನಸಭೆಗೆ ಕಳುಹಿಸಿಕೊಡುವ ಮಟ್ಟಕ್ಕೆ ಜಿಲ್ಲೆಯಲ್ಲಿ ಸಂಘ ಬಲಗೊಳ್ಳಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಸೈಯ್ಯದ್ ಖದಿರ್ ಮಾತನಾಡಿ, ರೈತ ಸಂಘದ ಸ್ಥಾಪನೆ ನಂತರ ಜಿಲ್ಲೆಯಲ್ಲಿ ರೈತರಿಗೆ ಚೈತನ್ಯ ಬಂದಿದೆ. ದೇಶದಲ್ಲಿ ಎಲ್ಲಾ ಜನಾಂಗಕ್ಕೆ ನ್ಯಾಯ ಸಿಗುತ್ತಿದೆ. ಆದರೆ ರೈತನಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ. ಸರ್ಕಾರವನ್ನು ಬದಲಾಯಿಸುವ ಶಕ್ತಿ ರೈತರಿಗಿದೆ. ಸ್ವಾರ್ಥಕ್ಕಾಗಿ ಯಾರೂ ರೈತ ಸಂಘವನ್ನು ಬಳಸಿಕೊಳ್ಳಬಾರದು. ಜಿಲ್ಲೆಯಲ್ಲಿ ನಡೆಯುವ ರೈತಪರ ಹೋರಾಟಕ್ಕೆ ರಾಜ್ಯ ಮಟ್ಟದ ನಾಯಕರು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ವಿವಿಧ ರಾಜ್ಯಗಳಿಂದ ರೈತ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗದಗದಿಂದ ಎಫ್.ವೈ ಕುರಿ, ಕಾರವಾರದಿಂದ ದಿವಾಕರ್ ಹೆಗ್ಗಡೆ, ದಾವಣಗೆರೆಯಿಂದ ಹೆಚ್.ಕೆ ಬಸವರಾಜಪ್ಪ, ಬಳ್ಳಾರಿಯಿಂದ ಸಂಷದ್ ಬೇಗಂ, ಹಾವೇರಿಯಿಂದ ವೀರಣ್ಣ ಮಾಕನೂರು, ಚಿತ್ರದುರ್ಗದಿಂದ ಪ್ರಕಾಶ್, ಕುಷ್ಟಗಿಯಿಂದ ಅರ್ಜುನ್, ದಾವಣಗೆರೆಯಿಂದ ಕೃಷ್ಣಮೂರ್ತಿ, ರಾಮನಗರದಿಂದ ರಮೇಶ್, ಕೊಪ್ಪಳದಿಂದ ಷಣ್ಮುಕಪ್ಪ ಪಾಲ್ಗೊಂಡರು. ಸ್ಥಳೀಯ ರೈತ ಮುಖಂಡರು ಗಳಾದ ಆದೇಂಗಡ ಅಶೋಕ್, ಕುಂಞಂಗಡ ಸಿದ್ದು, ಗುಡಿಯಂಗಡ ಮುತ್ತು ಪೂವಪ್ಪ, ಬಾದುಮಂಡ ಮಹೇಶ್, ಮಾಣೀರ ದೇವಯ್ಯ, ರಾಜಪ್ಪ, ಚೆಪ್ಪುಡೀರ ಮಹೇಶ್, ದೇಕಮಾಡ ವಿನು, ಮಚ್ಚಮಾಡ ರಂಜಿ, ಪ್ರವೀಣ್ ಇದ್ದರು.
-ಸುದ್ದಿಪುತ್ರ