*ಗೋಣಿಕೊಪ್ಪಲು, ಮೇ 15: ಟೀಮ್ ಕೂರ್ಗ್ ತಿತಿಮತಿ ಕ್ರಿಕೆಟರ್ಸ್ ಸಂಸ್ಥೆಯ ವತಿಯಿಂದ ತಾ. 24 ರಿಂದ 26 ರವರೆಗೆ 3 ದಿನಗಳ ಕಾಲ ತಿತಿಮತಿಯ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೊದಲ ವರ್ಷದ ತಾಲೂಕುಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ‘ಟೀಮ್ ಕೂರ್ಗ್ ತಿತಿಮತಿ ಕ್ರಿಕೆಟರ್ಸ್’ ಸಂಸ್ಥೆಯ ಅಧ್ಯಕ್ಷ ವಿನೋದ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಸಂಸ್ಥೆಯು ಮೊದಲನೇ ಹೆಜ್ಜೆಯಾಗಿ ಈ ಪಂದ್ಯಾವಳಿಯನ್ನು ಸಂಘಟಿಸುತ್ತಿದೆ. ಜಾತಿ, ಧರ್ಮದ ಬೇಧವಿಲ್ಲದೆ ತಾಲೂಕಿನ ಕ್ರಿಕೆಟ್ ತಂಡ ಈ ಪಂದ್ಯಾವಳಿಯಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ವಿಜೇತರಾಗುವ ವಿನ್ನರ್ಸ್ ತಂಡಕ್ಕೆ ರೂ. 30 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಅಲ್ಲದೆ ಪಂದ್ಯಾವಳಿಯ ರನ್ನರ್ಸ್ ತಂಡಕ್ಕೆ ರೂ. 15 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವದು. ಪಂದ್ಯಾವಳಿಯಲ್ಲಿ ಬೆಸ್ಟ್ ಆಲ್ರೌಂಡರ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ಕೀಪರ್, ಬೆಸ್ಟ್ ಕ್ಯಾಚರ್ ಸೇರಿದಂತೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವದು ಎಂದು ವಿವರಿಸಿದ ವಿನೋದ್, ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತ ತಂಡಗಳು ತಾ. 21 ರೊಳಗಾಗಿ 8971030919, 8296779215 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮನೋಜ್, ಸದಸ್ಯರಾದ ಸತೀಶ್ ಮತ್ತು ದೀಪು ಹಾಜರಿದ್ದರು.